ಹುಬ್ಬಳ್ಳಿ: 50 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಯುವತಿಯನ್ನು ಮದುವೆಯಾದ ಘಟನೆ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 50 ವರ್ಷದ ಪ್ರಕಾಶ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಮನೆಯಿಂದ ನಾಪತ್ತೆಯಾಗಿದ್ದ ಹುಬ್ಬಳ್ಳಿಯ ಕರೀಷ್ಮಾ, 50 ವರ್ಷದ ಸೆಕ್ಯೂರಿಟಿ ಪ್ರಕಾಶ್ ಎನ್ನುವಾತನ ಜೊತೆ ಪತ್ತೆಯಾಗಿದ್ದಳು.
ಅಲ್ಲದೇ ಇಬ್ಬರು ಮದುವೆಯಾಗಿದ್ದರು. ಆದ್ರೆ, ಅದೇನಾಯ್ತೋ ಏನೋ ಕರೀಷ್ಮಾ ಪ್ರಕಾಶನನ್ನು ಬಿಟ್ಟು ವಾಪಸ್ ಮನೆಗೆ ಓಡಿ ಬಂದಿದ್ದಾಳೆ. ಅಲ್ಲದೇ ಬಲವಂತವಾಗಿ ನನ್ನ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ಪ್ರಕಾಶನ ವಿರುದ್ಧ ಗಂಭೀರ ಆರೋಪ ಮಾಡಿದ್ದಳು.
ಅಲ್ಲದೇ ಈ ಸಂಬಂಧ ಕರೀಷ್ಮಾ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಒಂದು ವರ್ಷದ ಹಿಂದೆಯೂ ನನಗೆ ಪ್ರಕಾಶ್ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕಾಶನನ್ನು ಬಂಧಿಸಿದ್ದಾರೆ.