ಬೆಂಗಳೂರು: ವಿಧಾನಸೌಧದಲ್ಲಿ ಮತ್ತೊಂದು ‘ಮನಿ ಬ್ಯಾಗ್’ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಕ್ತಿಯೋರ್ವ 6 ಲಕ್ಷ ರೂ. ಹಣದೊಂದಿಗೆ ಒಳ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.
ಪೊಲೀಸರು ಬ್ಯಾಗ್ ತಪಾಸಣೆ ನಡೆಸಿದಾಗ 6 ಲಕ್ಷ ರೂ. ನಗದು ಪತ್ತೆಯಾಗಿದೆ. ವಿಧಾನಸೌಧದ ಒಳಗೆ ಇಷ್ಟು ಪ್ರಮಾಣದ ಹಣವನ್ನು ತೆಗೆದುಕೊಂಡು ಹೋಗಲು ಅನುಮತಿ ಇಲ್ಲವೆಂದು ತಿಳಿಸಿ, ಯುವಕನನ್ನು ತಡೆದು ವಿಚಾರಣೆ ನಡೆಸಿದರು.
ಈ ವೇಳೆ ಯುವಕ, ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯಲು ಬಂದಿದ್ದೇನೆ ಎಂದು ಹೇಳಿದ್ದಾನೆ. ತನ್ನ ದೊಡ್ಡಪ್ಪ ಆಸ್ಪತ್ರೆಗೆ ದಾಖಲಾಗಿರುವುದರಿಂದ ಚಿಕಿತ್ಸೆಗಾಗಿ ಹಣವನ್ನು ತಂದಿದ್ದೇನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಎಸಿಪಿ ಕೃಷ್ಣಯ್ಯ ಅವರ ಕಚೇರಿಯಲ್ಲಿ ಕೆಲಕಾಲ ವಿಚಾರಣೆ ನಡೆಸಿದರು. ಪರಿಶೀಲನೆ ಪೂರ್ಣಗೊಂಡ ನಂತರ ಹಣದೊಂದಿಗೆ ಯುವಕನನ್ನು ಕಳುಹಿಸಿರುವುದಾಗಿ ತಿಳಿದುಬಂದಿದೆ.
ಘಟನೆ ವಿಧಾನಸೌಧದ ಭದ್ರತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.



