ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಗಂಡು ಮಗುವಿನ ಎಡಗೈ ಕಿರು ಬೆರಳಿನ ಭಾಗವನ್ನೇ ನರ್ಸ್ ಕತ್ತರಿಸಿದ ಆರೋಪ ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ.
ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದ ಮಗುವನ್ನು ಫೆಬ್ರವರಿ 19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿ 24ರವರೆಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲು ನಿರ್ಧರಿಸಲಾಗಿತ್ತು. ಈ ವೇಳೆ ಡ್ರಿಪ್ಸ್ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆದುಹಾಕುವ ಸಂದರ್ಭ ನರ್ಸ್ ನಿರ್ಲಕ್ಷ್ಯದಿಂದ ಮಗುವಿನ ಎಡಗೈ ಕಿರು ಬೆರಳಿನ ಅರ್ಧ ಭಾಗ ಕಟ್ ಆಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಗಂಭೀರ ಗಾಯದಿಂದ ಮಗು ನರಳಾಡುತ್ತಿದ್ದು, ಈ ಕುರಿತು ಪೊಲೀಸ್ ದೂರು ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಮಗುವಿನ ತಂದೆ ವಿಜಯ್ ಕುಮಾರ್ ನೀಡಿದ ದೂರಿನಲ್ಲಿ, “ಬಿಲ್ಲಿಂಗ್ ಕೌಂಟರ್ಗೆ ಹಣ ಪಾವತಿಸಲು ಹೋಗಿದ್ದಾಗ ನರ್ಸ್ ಡ್ರೆಸ್ಸಿಂಗ್ ತೆಗೆಯುವ ವೇಳೆ ನಿರ್ಲಕ್ಷ್ಯ ತೋರಿದ್ದು, ಮಗುವಿನ ಬೆರಳು ಕತ್ತರಿಸಿದೆ. ವೈದ್ಯರು, ಸಿಬ್ಬಂದಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಘಟನೆ ಬಳಿಕ ಮಗುವನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ದು ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. “ಯಾವುದೇ ದೊಡ್ಡ ಗಾಯವಾಗಿಲ್ಲ, ಮಗು ಚಿಕ್ಕದಾಗಿರುವ ಕಾರಣ ಗಾಯ ಬೇಗ ಗುಣವಾಗುತ್ತದೆ” ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರೆಂದು ಪೋಷಕರು ತಿಳಿಸಿದ್ದಾರೆ. ಆದರೆ ಮಗುವಿನ ಅರ್ಧ ಬೆರಳು ಕಟ್ ಆಗಿದೆ ಎಂದು ವಿಜಯ್ ಕುಮಾರ್ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



