ಗದಗ:- ಟಿಪ್ಪರ್ ಹರಿದು ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ಜರುಗಿದೆ.
ಮೃತ ಬಾಲಕನನ್ನು ಧಾರವಾಡ ಜಿಲ್ಲೆ ಹಿಂಡಸಗೇರಿ ಗ್ರಾಮದ ನಿವಾಸಿ 6 ವರ್ಷದ ಪ್ರೀತಮ್ ಎಂದು ಗುರುತಿಸಲಾಗಿದೆ. ಇನ್ನೂ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.
ಮೃತ ಬಾಲಕ ಹಾಗೂ ಆತನ ತಾಯಿ ಗೀತಾ ಅವರು, ಜಿಲ್ಲೆಯ ಯತ್ನಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಬಸ್ ನಿಲ್ದಾಣದ ಬಳಿ ವೇಗವಾಗಿ ಬಂದ ಟಿಪ್ಪರ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಘಟನೆ ಖಂಡಿಸಿ ಗದಗ-ಲಕ್ಷ್ಮೇಶ್ವರ ಹೆದ್ದಾರಿ ಬಂದ್ ಮಾಡಿ ಹರ್ತಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.
ಇದೇ ವೇಳೆ ಟೈಯರಿಗೆ ಬೆಂಕಿ ಹಚ್ಚಿ ಆರ್ ಟಿ ಓ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು, ಸಾಲುಗಟ್ಟಿ ನಿಂತ ವಾಹನಗಳಿಂದ ಪ್ರಯಾಣಿಕರು ಪರದಾಡುವಂತಾಯ್ತು.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.