ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಮಂಗಳವಾರ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನದಲ್ಲಿ ಶಿರಹಟ್ಟಿ ಮತಕ್ಷೇತ್ರದಲ್ಲಿ ಸಂಜೆ 5ರವರೆಗೆ ಶೇ. 66.45ರಷ್ಟು ಮತದಾನವಾಯಿತು.
ಶಿರಹಟ್ಟಿ ಮತಕ್ಷೇತ್ರದಲ್ಲಿ ಬರುವ 251 ಮತಗಟ್ಟೆ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಮತಕೇಂದ್ರದತ್ತ ಧಾವಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಮತದಾರರನ್ನು ಮತದಾನ ಕೇಂದ್ರದತ್ತ ಕರೆದು ತಂದು ಮತದಾನಕ್ಕೆ ಪ್ರೇರೇಪಿಸುತ್ತಿದ್ದರು. ಮತಗಟ್ಟೆ ಕೇಂದ್ರಗಳಲ್ಲಿಯೂ ಸಹ ಸರತಿ ಸಾಲಿನಲ್ಲಿ ನಿಂತು ಮತದಾರರು ಮತದಾನವನ್ನು ಮಾಡಿದರು. ಮಧ್ಯಾಹ್ನದ ವೇಳೆಗೆ ಬಿರು ಬಿಸಿಲು ಇದ್ದುದರಿಂದ ಸಂಜೆ 4ರ ನಂತರ ಮತದಾನದ ಪ್ರಮಾಣ ಹೆಚ್ಚಳವಾಗುತ್ತಾ ಸಾಗಿತು.
ಮತಗಟ್ಟೆ ಕೇಂದ್ರ ಸಂಖ್ಯೆ 99ರಲ್ಲಿ ವಿವಿ ಪ್ಯಾಟ್, 168ರಲ್ಲಿ ಕಂಟ್ರೋಲ್ ಯೂನಿಟ್, 194ರಲ್ಲಿ ವಿವಿಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷದಿಂದ ಕೆಲ ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಅಧಿಕಾರಿಗಳು ತೆರಳಿ ದೋಷಗಳನ್ನು ಸರಿಪಡಿಸಿ ಮತದಾನಕ್ಕೆ ಅವಕಾಶವನ್ನು ಕಲ್ಪಿಸಿದರು.