ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆ ಅಲೇರುಮಂಡಲ ಕೊಲನುಪಾಕ ಶ್ರೀ ಚಂಡಿಕಾಂಬಾ ಸಮೇತ ಸ್ವಯಂಭೂ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜನವರಿ 7ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ 69ನೇ ಜನ್ಮ ದಿನೋತ್ಸವ ಹಾಗೂ ವೀರಶೈವ ಸಂಸ್ಕೃತಿ ಸಂವರ್ಧನಾ ಸಮಾರಂಭ ನಡೆಯುವುದು.
ಜ. 3ರಿಂದ 7ರವರೆಗೆ ಪ್ರತಿ ದಿನ ಪ್ರಾತಃಕಾಲ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಶ್ರೀ ಸ್ವಯಂಭು ಸೋಮೇಶ್ವರ ಮಹಾಲಿಂಗಕ್ಕೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಸಹಸ್ರ ಪುಷ್ಪಾರ್ಚನೆ ಹಾಗೂ ಶ್ರೀ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ಜರುಗುವುದು. ಐದೂ ದಿನಗಳ ಸಮಾರಂಭಗಳಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಸಚಿವರು, ಗಣ್ಯರು, ವಿವಿಧ ಮಠಾಧೀಶರು ಹಾಗೂ ಶ್ರೀ ಕೊಲ್ಲಿಪಾಕಿ ಸೋಮೇಶ್ವರ ಜಗದ್ಗುರು ರೇಣುಕಾಚಾರ್ಯ ಡೆವೆಲಪಮೆಂಟ್ & ಚಾರಿಟೇಬಲ್ ಟ್ರಸ್ಟ್ನ ಪದಾಧಿಕಾರಿಗಳು ಸದಸ್ಯರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.