ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕನ್ನಡ ಎಂಬುದು ಬರೀ ಭಾಷೆಯಲ್ಲ. ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ, ಸ್ವಾಭಿಮಾನ ಅಂತರ್ಗತವಾಗಿರಬೇಕು ಎಂದು ತಹಸೀಲ್ದಾರ ವಾಸುದೇವ ಎಂ.ಸ್ವಾಮಿ ಹೇಳಿದರು.
ಅವರು ಶುಕ್ರವಾರ ತಾಲೂಕಾಡಳಿತದಿಂದ ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
2500 ವರ್ಷಗಳ ಶ್ರೇಷ್ಠ ಇತಿಹಾಸ ಹೊಂದಿರುವ ಕನ್ನಡ ನಾಡು-ನುಡಿಯ ಶ್ರೀಮಂತಿಕೆ ವಿಶ್ವಮಾನ್ಯಗೊಳಿಸುವಲ್ಲಿ ನುಡಿಗಿಂತ ನಡೆ ಮುಖ್ಯವಾಗಿದೆ. ಕನ್ನಡ ಭಾಷೆ-ಸಂಸ್ಕೃತಿ, ನೆಲ-ಜಲದ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿಗಳ ಆತ್ಮಾವಲೋಕನವಾಗಬೇಕಿದೆ. ಕನ್ನಡ ನಮ್ಮ ಬದುಕಿನ, ಅನ್ನದ ಭಾಷೆಯಾಗಿ ನಿತ್ಯ ಜೀವನದಲ್ಲಿ ಬಳಕೆಯಾಗಬೇಕು. ಕನ್ನಡ ನಿತ್ಯೋತ್ಸವವಾಗಬೇಕು. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಗೌರವಾಭಿಮಾನ ಮೂಡಿಸುವಲ್ಲಿ ಪಾಲಕ, ಶಿಕ್ಷಕ ಮತ್ತು ಕನ್ನಡ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ. ಗದಗ ಜಿಲ್ಲೆಗೆ ಪಂಪ, ಕುಮಾರವ್ಯಾಸ, ಹುಯಿಲಗೋಳ ನಾರಾಯಣರಾಯರಂತಹ ಕೊಡುಗೆ ಅಪಾರ. ಕನ್ನಡದ ಅಸ್ಮಿತೆಯನ್ನು ಜಗಕೆಲ್ಲ ಬೆಳಗಿಸುವ ಸಂಕಲ್ಪ ಕನ್ನಡಿಗರದ್ದಾಗಬೇಕು ಎಂದರು.
ಕರ್ನಾಟಕ ಸ್ವಾಭಿಮಾನಿ ಸೇನೆ ಬೆಳಗಾಂವ ವಿಭಾಗದ ಮುಖ್ಯಸ್ಥ ಶರಣು ಗೋಡಿ ಮಾತನಾಡಿ, ಪತ್ರಿಯೊಂದು ನಾಗಹಬ್ಬದ ಕಾರ್ಯಕ್ರಮದಲ್ಲೂ ನಾಡಗೀತೆ ಏಕ್ ಸಾಥ್ ಸುರುಕರ್ ಬದಲಾಗಿ ಕನ್ನಡದಲ್ಲೇ ಹಾಡಲು ಎಲ್ಲರೂ ಸೇರಿ ಹೇಳಿ ಎನ್ನುವಂತಾಗಬೇಕು. ಮೊದಲು ಹಿಂದಿ ಹೇರಿಕೆಯಿಂದ ಹೊರಬರಲು ಕನ್ನಡಿಗರು ಸಂಕಲ್ಪ ಮಾಡಬೇಕು. ತುಂಗಭದ್ರಾ ನದಿಯಿಂದ ಪ್ರಾರಂಭಗೊಳ್ಳಬೇಕಿರುವ ಸಿಂಗಟಾಲೂರ, ಇಟಗಿ ಸಾಸಲವಾಡ ಏತನೀರಾವರಿ ಯೋಜನೆ ಸಾಕಾರಗೊಳಿಸಲು ಈ ಭಾಗದ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕು. ಇದರಿಂದ ನಮ್ಮ ಭಾಗದ ರೈತರ ಬವಣೆ ತಪ್ಪುತ್ತದೆ ಎಂದರು.
ಮಕ್ಕಳಿಂದ ಕನ್ನಡ ನಾಡಿನ ಮುಕುಟಮಣಿಗಳ ವೇಷಭೂಷಣ, ರೂಪಕ ಪ್ರಸ್ತುತ ಪಡಿಸಲಾಯಿತು. ನಾಗರಾಜ ಹಣಗಿ, ಎ.ಐ ಮಿಯಾನವರ, ಫಕ್ಕಿರೇಶ ಕಾಡಣ್ಣವರ, ಷಣ್ಮುಕ ಗಡ್ಡೆಣ್ಣವರ, ಅಪ್ಸಾನಾ ನದಾಫ್ ಸೇರಿ 20ಕ್ಕೂ ಹೆಚ್ಚು ಹಿರಿಯ-ಕಿರಿಯ ಕವಿಗಳಿಂದ ಸುವರ್ಣ ಕವಿಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಮುಖ್ಯಾಧಿಕಾರಿ ಮಹೇಶ ಹಡಪದ, ಸಿಪಿಐ ನಾಗರಾಜ ಮಾಡಳ್ಳಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ ಮಾತನಾಡಿದರು. ಪಿಎಸ್‌ಐ ಈರಪ್ಪ ರಿತ್ತಿ, ಹೆಸ್ಕಾಂ ಎಇಇ ಆಂಜನಪ್ಪ, ಎಸ್.ಕೆ. ಜಲರಡ್ಡಿ, ಚಂದ್ರಶೇಖರ ನರಸಮ್ಮನವರ, ಎಂ.ಎಸ್. ಚಾಕಲಬ್ಬಿ, ಮಂಜುನಾಥ ಅಮಾಸಿ, ಬಿ.ಎಸ್. ಹಿರೇಮಠ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು. ಶಿಕ್ಷಕರಾದ ಉಮೇಶ ನೇಕಾರ, ಸತೀಶ ಬೋಮಲೆ, ನಾಗರಾಜ ಮಜ್ಜಿಗುಡ್ಡದ, ಎನ್.ಎ. ಮುಲ್ಲಾ ನಿರ್ವಹಿಸಿದರು.
ತಾಲೂಕಾ ಕಸಾಪ ಅಧ್ಯಕ್ಷ, ಸಾಹಿತಿ ಈಶ್ವರ ಮೆಡ್ಲೇರಿ ಉಪನ್ಯಾಸ ನೀಡಿ, ಕನ್ನಡ ನಾಡಿನ ದೇದೀಪ್ಯಮಾನವಾದ ಇತಿಹಾಸವನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಅರುಹಿದರೆ ಅವರ ಎದೆಯಾಂತರಾಳದಲ್ಲಿ ಕನ್ನಡದ ಬಗ್ಗೆ ಅಭಿಮಾನ, ಸ್ವಾಭಿಮಾನ, ಗರ್ವ ಮೇಳೈಸುತ್ತದೆ. ಮೌರ್ಯರು, ಶಾತವಾಹನರು, ಕದಂಬರು, ಗಂಗರು, ಬಾದಾಮಿಯ ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದಿಂದ ಇಂದಿನವರೆಗೂ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ವಿಜಂಭಿಸುತ್ತಾ ಬಂದಿದೆ. ಕನ್ನಡ ಸಾರಸ್ವತ ಲೋಕಕ್ಕೆ ಆದಿಕವಿ ಕವಿ ಪಂಪನ ಸಾಹಿತ್ಯದ ಕ್ಷೇತ್ರ ಪುಲಿಗೆರೆಯ ತಿರುಳ್ಗನ್ನಡ ನಾಡಿನ ಕೊಡುಗೆ ಅಪಾರ. ಪುಲಿಗೆರೆ ಇತಿಹಾಸವಿಲ್ಲದೇ ಕನ್ನಡ ಸಾಹಿತ್ಯ ಅಪೂರ್ಣವೆಂದೇ ಹೇಳಬಹುದಾಗಿದ್ದು, ಕನ್ನಡದ ತವರು ನೆಲ ಪುಲಿಗೆರೆ ನಾಡಿನಲ್ಲಿ ಜನಿಸಿದ ನಾವೆಲ್ಲ ಧನ್ಯರು ಎಂದರು.