ವಿಜಯಸಾಕ್ಷಿ ಸುದ್ದಿ, ಗದಗ : `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು’ ಎಂದು ಗದುಗಿನ ಹುಯಿಲಗೋಳ ನಾರಾಯಣರಾಯರಿಂದ ರಚನೆಯಾದ ಈ ಗೀತೆಯು ಶತಮಾನೋತ್ಸವ ಆಚರಿಸುತ್ತಿದೆ. 1970ರವರೆಗೆ ಇದುವೇ ನಾಡಗೀತೆಯಾಗಿ ಗೌರವ ಪಡೆದದ್ದು ನಮ್ಮೆಲ್ಲರಿಗೆ ಹೆಮ್ಮೆ ಹಾಗೂ ಅಭಿಮಾನದ ಸಂಗತಿ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅನೇಕ ಮಹನೀಯರು ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಫಲಶ್ರುತಿಯಾಗಿ ಹಂಚಿಹೋಗಿದ್ದ ಈ ರಾಜ್ಯವು 1956ರಲ್ಲಿ ಮೈಸೂರು ರಾಜ್ಯವಾಗಿ ಉದಯವಾಯಿತು. ಭಾಷಾವಾರು ಪ್ರಾಂತ್ಯ ನಿರ್ಮಾಣವಾಗಬೇಕೆಂದು ಕರ್ನಾಟಕ ಏಕೀಕರಣ ಚಳುವಳಿಯ ಉದ್ದೇಶವಾಗಿದ್ದರಿಂದ ಮೈಸೂರು ರಾಜ್ಯವನ್ನು 1973 ನವೆಂಬರ್ 1ರಂದು ಕರ್ನಾಟಕ ರಾಜ್ಯವೆಂದು ಪುನರ್ ನಾಮಕರಣ ಮಾಡಲಾಯಿತು ಎಂದು ತಿಳಿಸಿದರು.
ನಮ್ಮ ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದ ಬೀಡು. ಇದಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಏಕೀಕರಣ ಚಳುವಳಿಯ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದ ಕನ್ನಡದ ಕುಲಪುರೋಹಿತರಾದ ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ ಅವರನ್ನು ನಾವೆಲ್ಲ ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸೋಣ ಎಂದರು.
ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ರನ್ನ, ಸವಡಿಯ 1ನೇ ನಾಗವರ್ಮ, ಚಿಕ್ಕಹಂದಿಗೋಳದ ಶಾಸನಕವಿ ಮಲ್ಲ, ದುರ್ಗಸಿಂಹ, ಕುಮಾರವ್ಯಾಸ, ಚಾಮರಸ, ನಯಸೇನ, ಪುಲಿಗೆರೆಯ ಸೋಮನಾಥ, ಮುಕ್ತಾಯಕ್ಕ ಒಂದಡೆಯಾದರೆ ಇನ್ನೊಂದೆಡೆ ನಮ್ಮ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯ ಕಿರೀಟಕ್ಕೆ ಗರಿಯನ್ನು ಮೂಡಿಸಿದವರು ಹುಯಿಗೋಳ ನಾರಾಯಣರಾಯರು, ಡಾ. ಎಂ.ಎಸ್. ಸುಂಕಾಪುರ, ಪ್ರೊ. ಕೀರ್ತಿನಾಥ ಕುರ್ತಕೋಟಿ, ಡಾ. ಚನ್ನವೀರ ಕಣವಿ, ಡಾ. ಗಿರಡ್ಡಿ ಗೋವಿಂದರಾಜ, ಡಾ. ಎನ್.ಕೆ. ಕುಲಕರ್ಣಿ, ಮಾಧವ ಕುಲಕರ್ಣಿ, ಡಾ. ಎಚ್.ಎನ್. ಹೂಗಾರ, ಡಾ. ರಾಜಶೇಖರ ಭೂಸನೂರಮಠ, ಹಿಂದೂಸ್ತಾನಿ ಗಾಯಕ, ಭಾರತರತ್ನ ಪುರಸ್ಕೃತ ಪಂಡಿತ ಭೀಮಸೇನ ಜೋಶಿಯವರು, ಸಂಗೀತ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಮತ್ತು ವಿಕಲಚೇತನರ ಬಾಳಿನ ಬೆಳಕಾದ ಡಾ. ಪುಟ್ಟರಾಜ ಕವಿಗವಾಯಿಗಳು, ಕನ್ನಡದ ಜಗದ್ಗುರುಗಳೆಂದೇ ಮನೆಮಾತಾದ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಪತ್ರಿಕಾರಂಗದ ದಿಗ್ಗಜರಾದ ಪ.ಲೋ. ಬಂಕಾಪುರ, ಜೀವನ, ಪಂಢರಿನಾಥ ಗಲಗಲಿ, ಹ.ರಾ. ಕಿದಿಯೂರ, ಎಚ್.ಎಸ್. ಹೊಂಬಾಳಿ, ಕೌತಾಳ ವೀರಪ್ಪ, ಆರ್.ಕೆ. ಜಮಾದಾರ ಮೊದಲಾದವರು ಸ್ಮರಣೀಯರು ಎಂದು ನುಡಿದರು.
1973 ನವಂಬರ್ 1, 2 ಮತ್ತು 3ರಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವವನ್ನು ಮರುಸೃಷ್ಟಿಸಿ, 2023ರ ನವಂಬರ್ 1, 2 ಮತ್ತು 3ರಂದು ಮೂರು ದಿನಗಳ ಕಾಲ ಗದುಗಿನಲ್ಲಿ ಗತವೈಭವ ಮರುಕಳಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲ ಸಾಕ್ಷಿಯಾಗಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಸಚಿವ ಸಂಪುಟದ 20ಕ್ಕೂ ಹೆಚ್ಚು ಸಚಿವರು, ಕನ್ನಡಾಭಿಮಾನಿಗಳು ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಮಕರಣ ಮಹೋತ್ಸವದ ಇತಿಹಾಸವನ್ನು ಮೆಲುಕು ಹಾಕಿದರು. ಇಂದು ‘ಕರ್ನಾಟಕ ಸಂಭ್ರಮ-50’ ಒಂದು ವರ್ಷದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವಾಗಿದ್ದು, ಕನ್ನಡ ನಾಡು-ನುಡಿಯ ಅಭಿಮಾನ ಬೆಳೆಸಲು ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭ ಔಚಿತ್ಯಪೂರ್ಣವಾಗಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಗದುಗಿನ ಇತಿಹಾಸದಲ್ಲಿ ಕರ್ನಾಟಕ ಸಂಭ್ರಮ-50 ಐತಿಹಾಸಿಕ ಮೈಲಿಗಲ್ಲು. ಕನ್ನಡ ಭಾಷೆಯನ್ನಾಡುವ ಕನ್ನಡಿಗರು ಒಂದೇ ರಾಜ್ಯದ ಆಳ್ವಿಕೆಯಲ್ಲಿ ಒಂದಾಗಬೇಕು ಎನ್ನುವ ಆಶಯದಂತೆ ನವಂಬರ್-1, 1956ರಂದು ಕರ್ನಾಟಕ ಏಕೀಕರಣವಾಯಿತು. ಗದುಗಿನ ಕಾಟನ್ ಸೇಲ್ ಸೊಸೈಟಿಯಲ್ಲಿ 27, 28 ಮತ್ತು 29ರ ಡಿಸೆಂಬರ್ 1961ರಲ್ಲಿ ಜರುಗಿದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕೆ.ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ.ಎಚ್. ಪಾಟೀಲ ಅವರ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಂತರ ಹೋರಾಟದ ಫಲವಾಗಿ 1973 ನವಂಬರ್ 1ರಂದು ಮೈಸೂರು ರಾಜ್ಯ ‘ಕರ್ನಾಟಕ’ ಎಂದು ನಾಮಕರಣವಾಯಿತು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.
ನಾಮಕರಣ ಕರ್ನಾಟಕ ಸಂಭ್ರಮಾಚರಣೆಯನ್ನು ಗದುಗಿನಲ್ಲಿ 1973ರ ನವಂಬರ್ 3ರಂದು ಹಂಪೆಯ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರಜ್ವಲಿಸಿದ ಕನ್ನಡ ಜ್ಯೋತಿಯನ್ನು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಸ್ವೀಕರಿಸಿದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ, ಮೈಸೂರಿನ ಅರಸರಾದ ಜಯಚಾಮರಾಜೇಂದ್ರ ಒಡೆಯರ ಹಾಗೂ ಅರಣ್ಯ ಮತ್ತು ಕೃಷಿ ಸಚಿವರಾದ ಕೆ.ಎಚ್. ಪಾಟೀಲ, ಪೌರಾಡಳಿತ ಸಚಿವರಾದ ಡಿ.ಕೆ. ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ದೇವೇಂದ್ರಪ್ಪ ಗಾಳಪ್ಪ ಹಾಗೂ ಕನ್ನಡಾಭಿಮಾನಿಗಳು ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ ಸೊಸೈಟಿಯವರೆಗೆ ಮೆರವಣಿಗೆ ಮೂಲಕ ಬಂದು ಸಾರ್ವಜನಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವವನ್ನು ಸಂಭ್ರಮಿಸಿದ್ದು ಇತಿಹಾಸದಲ್ಲಿ ದಾಖಲಾರ್ಹ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.