HomeGadag Newsಬಿಜೆಪಿಯ 7 ಸದಸ್ಯರಿಂದ ಸಭಾತ್ಯಾಗ

ಬಿಜೆಪಿಯ 7 ಸದಸ್ಯರಿಂದ ಸಭಾತ್ಯಾಗ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರಕಾರದಿಂದ ಮಂಜೂರಾದ ಅನುದಾನದಲ್ಲಿ ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡುವ ವಿಷಯವಾಗಿ ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯರ ವಾರ್ಡುಗಳಿಗೆ ಅನ್ಯಾಯ, ತಾರತಮ್ಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿಯ 7 ಸದಸ್ಯರು ಸಭೆಯಿಂದ ಹೊರ ನಡೆದ ಘಟನೆ ಲಕ್ಷ್ಮೇಶ್ವರ ಪುರಸಭೆಯಲ್ಲಿ ಜರುಗಿತು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಪುರಸಭೆ ಆಡಳಿತ ಮಂಡಳಿಯ ವಿಶೇಷ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆ ಪ್ರಾರಂಭದಲ್ಲಿ ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮಾಂತೇಶ ಬೀಳಗಿ ಅವರನ್ನು ಸ್ವಾಗತಿಸಿದರು. ಈ ವೇಳೆ ಹಿರಿಯ ಸದಸ್ಯರಾದ ರಾಜೀವ ಕುಂಬಿ, ಮಹೇಶ ಹೊಗೆಸೊಪ್ಪಿನ, ಅಶ್ವಿನಿ ಅಂಕಲಕೋಟಿ, ಪ್ರವೀಣ ಬಾಳಿಕಾಯಿ ಮಾತನಾಡಿ, ಜಿಲ್ಲೆಯಲ್ಲಿ ಲಕ್ಷ್ಮೇಶ್ವರ ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು, ತಕ್ಕಂತೆ ಅಭಿವೃದ್ಧಿ ಕಾರ್ಯ ಮಾಡುವುದು ಮುಖ್ಯವಾಗಿದೆ. ಇದರಿಂದ ಮುಖ್ಯಾಧಿಕಾರಿಗಳಾದವರು ಪಟ್ಟಣದಲ್ಲಿಯೇ ವಾಸಿಸಬೇಕು ಎಂದರು.

ಇದಕ್ಕೆ ಮಹಾಂತೇಶ ಬೀಳಗಿ ಅವರು ಎಲ್ಲರ ಸಹಕಾರದಿಂದ ಪಟ್ಟಣದ ಅಭಿವೃದ್ಧಿಗೆ ಕಾರ್ಯ ಮಾಡುತ್ತೇನೆ ಎಂದು ಹೇಳಿದರು. ನಂತರ ವಿಷಯ ಪಟ್ಟಿಯನ್ವಯ 2025-26ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸರಕಾರದಿಂದ ಮಂಜೂರಾದ 1.93 ಕೋಟಿ ರೂಗಳಲ್ಲಿ ನಿಯಮಾವಳಿಯಂತೆ ಕಾಮಗಾರಿಗಳ ಕ್ರೀಯಾಯೋಜನೆ ಅನುಮೋದನೆ ನೀಡುವ ಕುರಿತು ಚರ್ಚೆ ಪ್ರಾರಂಭವಾದಾಗ ಬಿಜೆಪಿ ಸದಸ್ಯೆ ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ, ಪೂರ್ಣಿಮಾ ಪಾಟೀಲ, ಪೂಜಾ ಖರಾಟೆ, ಮಹಾದೇವಪ್ಪ ಅಣ್ಣಿಗೇರಿ, ಮಂಜುಳಾ ಗುಂಜಳ, ಶೋಭಾ ಮೆಣಸಿನಕಾಯಿ ಅವರು ಕ್ರಿಯಾಯೋಜನೆಯಲ್ಲಿ ತಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸೇರಿಸಬೇಕು ಎಂದರು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮುಕಿ ನಡೆಯಿತು. ಅಧ್ಯಕ್ಷರೂ ಸಹ ಆಡಳಿತ ಪಕ್ಷದ ಕ್ರಮವನ್ನು ಸಮರ್ಥಿಸಿಕೊಂಡರು.

ಬಿಜೆಪಿ ಸದಸ್ಯರ ಗಮನಕ್ಕೆ ತರದೆ ಸಭೆಯಲ್ಲಿ ಅನುಮೋದನೆಗಾಗಿ ಪೂರ್ವ ನಿರ್ಧರಿತವಾದ ವಿಷಯ ಇಟ್ಟುಕೊಂಡಿರುವದು ಯಾವ ಕಾರಣಕ್ಕೆ, 23 ವಾರ್ಡ್ಗಳ ಅಭಿವೃದ್ಧಿಗೂ ಸರ್ಕಾರದ ಅನುದಾನ ಸಮಾನವಾಗಿ ಹಂಚಿಕೆ ಮಾಡದೆ ಆಡಳಿತ ಪಕ್ಷದ ಸದಸ್ಯರ ವಾರ್ಡ್ಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಿರುವುದು ಯಾವ ನ್ಯಾಯ? ಈ ಸಭೆ ಏಕಪಕ್ಷೀಯವಾಗಿ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಕ್ರಿಯಾಯೋಜನೆಗೆ ಅನುಮೋದನೆ ನೀಡಿರುವ ಬಹುಮತದ ಕಾಂಗ್ರೆಸ್ ಸದಸ್ಯರು ಸಹಿ ಮಾಡಿದ ಪತ್ರವನ್ನು ಸಭೆಗೆ ಸಲ್ಲಿಸಿದರು. ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಈ ವೇಳೆ ರಾಮಪ್ಪ ಗಡದವರ ಕಲಾಂ ನಗರದಲ್ಲಿ 10 ವರ್ಷದ ಹಿಂದೆಯೇ ನಿರ್ಮಿಸಿದ ಜಲಾಗಾರಕ್ಕೆ ಮತ್ತು ಪ್ರವೀಣ ಬಾಳಿಕಾಯಿ ಅವರು ಮುಕ್ತಿಮಂದಿರ ರಸ್ತೆಯಲ್ಲಿ ನಿರ್ಮಿಸಿದ ಜಲಾಗಾರಕ್ಕೆ ಪೈಪ್‌ಲೈನ್ ಅಳವಡಿಕೆ ಸೇರಿ ನೀರು ಸರಬರಾಜಿಗೆ ಅಗತ್ಯದ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಂಡರು.

ಉಪಾಧ್ಯಕ್ಷ ಫಿರ್ದೋಸ್ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ಕಿರಿಯ ಅಭಿಯಂತರ ವಿರೇಂದ್ರಸಿAಗ್ ಕಾಟೇವಾಲೆ, ಮಂಜುಳಾ ಹೂಗಾರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು. ಹನುಮಂತ ನಂದೆಣ್ಣವರ ನಿರೂಪಿಸಿದರು.

ವಿರೋಧ ಪಕ್ಷದ ಸದಸ್ಯರ ಸಭಾತ್ಯಾಗದ ನಡುವೆಯೂ ಮೊದಲೇ ನಿರ್ಧರಿಸಿದಂತೆ 1.93 ಕೋಟಿ ರೂಗಳ ಅನುದಾನದಲ್ಲಿ 57.90 ಲಕ್ಷ ರೂಗಳ ವೆಚ್ಚದಲ್ಲಿ ಕುಡಿಯುವ ನೀರು, 77.20 ಲಕ್ಷ ರೂಗಳ ಮುಕ್ತನಿಧಿಯಲ್ಲಿ ರಸ್ತೆ ಚರಂಡಿ ಇತ್ಯಾದಿಗಳ ದುರಸ್ತಿ, ಹಾಗೂ ಘನತ್ಯಾಜ್ಯ ನಿರ್ವಹಣೆಗಾಗಿ 58.60 ಲಕ್ಷ ರೂಗಳನ್ನು ವಿನಿಯೋಗಿಸುವ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!