ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ವಾಹನಗಳ ಅಕ್ರಮ ಮಾಡಿಫಿಕೇಶನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹದ್ದೇ ಘಟನೆಯಲ್ಲಿ ಕೇವಲ ₹70 ಸಾವಿರ ಮೌಲ್ಯದ ಕಾರಿಗೆ ವಿದ್ಯಾರ್ಥಿಯೊಬ್ಬರಿಗೆ ₹1.11 ಲಕ್ಷ ದಂಡ ವಿಧಿಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇರಳ ಮೂಲದ ವಿದ್ಯಾರ್ಥಿಯೊಬ್ಬರು ಜನವರಿ 2ರಂದು ನಗರದ ಹೆಣ್ಣೂರು ರಸ್ತೆ ಬಳಿ ಕಾರು ಚಲಾಯಿಸುತ್ತಿದ್ದ ವೇಳೆ, ಕಾರಿನ ಹಿಂದಿನಿಂದ ಬೆಂಕಿಯ ಕಿಡಿ ಹಾಗೂ ಭಾರೀ ಶಬ್ದ ಹೊರಬರುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದ ಆತಂಕಗೊಂಡ ದಾರಿಹೋಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಸಂಚಾರಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಸಂಬಂಧಿತ ಕಾರು ಹಾಗೂ ವಿದ್ಯಾರ್ಥಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದರು. ಪ್ರಕರಣ ದಾಖಲಿಸುವ ಬದಲು, ಸಂಚಾರ ಪೊಲೀಸರು ನಿಯಮ ಉಲ್ಲಂಘನೆ ಸಂಬಂಧ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ದೂರು ಸಲ್ಲಿಸಿದರು.
ತನಿಖೆ ನಡೆಸಿದ ಆರ್‌ಟಿಒ ಅಧಿಕಾರಿಗಳು, ಕಾರಿನಲ್ಲಿ ಅಕ್ರಮವಾಗಿ ಮಾಡಿಫೈ ಮಾಡಲಾದ ಸೈಲೆನ್ಸರ್ ಇರುವುದನ್ನು ದೃಢಪಡಿಸಿದರು. ಈ ಸೈಲೆನ್ಸರ್ ಅತಿಯಾದ ಶಬ್ದವನ್ನು ಉಂಟುಮಾಡುವುದಲ್ಲದೆ, ಇತರ ವಾಹನ ಚಾಲಕರಲ್ಲಿ ಭಯ ಹುಟ್ಟಿಸುವಂತೆ ಬೆಂಕಿಯ ಕಿಡಿಗಳನ್ನು ಹೊರಸೂಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೃತ್ಯ ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಿದ್ಯಾರ್ಥಿಗೆ ರಾಜಕೀಯ ಪ್ರಭಾವವಿದ್ದು, ಕಡಿಮೆ ದಂಡ ವಿಧಿಸುವಂತೆ ಪೊಲೀಸರ ಮೇಲೆ ಒತ್ತಡವೂ ಬಂದಿತ್ತು ಎನ್ನಲಾಗಿದೆ. ಆದರೆ ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ₹1,11,500 ದಂಡ ವಿಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ದಂಡ ಪಾವತಿಸಿದ ಬಳಿಕ ಕಾರನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಅಕ್ರಮ ವಾಹನ ಮಾಡಿಫಿಕೇಶನ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.



