ವಿಜಯಸಾಕ್ಷಿ ಸುದ್ದಿ, ಗದಗ : ಪೃಕೃತಿಯ ಮಡಿಲು ಬಿಟ್ಟು ಮಾನವ ಬದುಕಲು ಸಾಧ್ಯವಿಲ್ಲ. ಇಂತಹ ಪರಿಸರ ಉಳಿಸಿ-ಬೆಳೆಸಿ, ಹಸಿರು ಸಮುದಾಯ ಸೃಷ್ಟಿಸುವ ಸಾಮಾಜಿಕ ಹೊಣೆಗಾರಿಕೆ ಎಲ್ಲರ ಮೇಲಿದೆ. ಹಸಿರು ಸಮುದಾಯ ನಿರ್ಮಿಸುವ ಸಂಕಲ್ಪದಿಂದಾಗಿ ಪ್ರಸಕ್ತ ವರ್ಷದಲ್ಲಿ 70 ಸಾವಿರ ಸಸಿಗಳನ್ನು ವಿತರಿಸುವ ಗುರಿ ನಿಗದಿ ಮಾಡಲಾಗಿದೆ ಎಂದು ಗದಗ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ನವೀನ ನಾಯ್ಕ ಹೇಳಿದರು.
ಗದಗ ತಾಲೂಕಿನಾದ್ಯಂತ ಇರುವ ಸಾಮಾಜಿಕ ವಲಯದ ವ್ಯಾಪ್ತಿಯಲ್ಲಿ ಹಸಿರು ಸಮುದಾಯ ಸೃಷ್ಟಿಸುವ ಪ್ರಮುಖ ಉದ್ದೇಶದಿಂದಾಗಿಯೇ ಆರ್‌ಎಸ್‌ಪಿಡಿ, ಆರ್‌ಕೆವಿವಾಯ್ ಹಾಗೂ ನರೇಗಾ ಯೋಜನೆಗಳ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಒಂದು ವರ್ಷದ ಸಸಿಗೆ 40 ರೂ.ಗಳಿದ್ದರೆ 6 ರೂ.ಗಳಲ್ಲಿ ಆ ಸಸಿಗಳನ್ನು ಬಿಂಕದಕಟ್ಟಿಯ ಹೈಟೆಕ್ ನರ್ಸಿಂಗ್ ಕೇಂದ್ರ ವಿತರಿಸುವ ಮೂಲಕ ಸಸಿಗಳನ್ನು ನೆಡಲು ಪ್ರೇರಣೆ ನೀಡಲಿದೆ. ಬಿಂಕದಕಟ್ಟಿ ಹೈಟೆಕ್ ನರ್ಸಿಂಗ್ ಕೇಂದ್ರದಲ್ಲಿ ನುಗ್ಗೆ, ಸಾಗವಾನಿ, ಹುಣಸಿ, ಮಹಾಗನಿ, ನೆಲ್ಲಿ, ಬಿದಿರು, ಬೇವು ಸೇರಿದಂತೆ ವಿವಿಧ ತಳಿಯ ಸಸಿಗಳು ಲಭ್ಯವಿವೆ.
ಬಿಸಿಲಿನ ಬೇಗೆ ತಡೆಯಲು ತಂಪಾದ ವಾತವಾರಣ ನಿರ್ಮಿಸಿ ಮಳೆಗೆ ಅನುವು ಮಾಡಿಕೊಡುವ ಪರಿಸರ ಸೃಷ್ಟಿಗೆ ಸಸಿಗಳ ಬೆಳವಣಿಗೆ ಅತಿ ಮುಖ್ಯವಾಗಿದೆ. ಈ ಉದ್ದೇಶದಿಂದ ಕಳೆದ ವರ್ಷ 48 ಸಾವಿರ ಸಸಿಗಳನ್ನು ವಿತರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 70 ಸಾವಿರ ಸಸಿಗಳನ್ನು ವಿತರಿಸುವ ಗುರಿ ನಿಗದಿ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ರೈತರು ತಮ್ಮ ಉದ್ಯೋಗ ಗುರುತಿನ ಚೀಟಿಯ ಮೂಲಕ ಉಚಿತವಾಗಿ ಪಡೆಯಬಹುದು ಎಂದು ಅರಣ್ಯ ಅಧಿಕಾರಿ ನವೀನ ನಾಯ್ಕ ವಿವರಿಸಿದರು.
ಬೇಸಿಗೆ ಕಾಲದಲ್ಲಿ ನಮಗೆ ಬೇಕಾದ ಬೀಜಗಳನ್ನು ಜಿಲ್ಲೆಯಾದ್ಯಂತ ಸಂಚರಿಸಿ ಶೇಖರಣೆ ಮಾಡುತ್ತೇವೆ. ಲಭ್ಯವಿರದ ಬೀಜಗಳನ್ನು ಇತರೆ ಜಿಲ್ಲೆಗಳಿಂದ ತರಿಸುತ್ತೇವೆ. ಶ್ರೀಗಂಧ, ಕಬೂಬಿಯ, ನುಗ್ಗಿ, ಹೆಬ್ಬೇವು, ಬಿದಿರು ಬೀಜಗಳನ್ನು ಮೈಸೂರು, ದಾವಣಗೇರಿ, ಶಿವಮೊಗ್ಗದಿಂದ ತರಿಸುತ್ತೇವೆ. ಬೀಜಗಳಿಂದ ಸಸಿ ಬೆಳೆದು ಒಂದು ವರ್ಷ ಆದ ಬಳಿಕ ಪೂರೈಕೆ ಮಾಡುತ್ತೇವೆ ಎನ್ನುತ್ತಾರೆ ಉಪ ವಲಯ ಅರಣ್ಯಾಧಿಕಾರಿ ಎಸ್.ಎಮ್. ಲಮಾಣಿ.
ರೈತರು, ಪರಿಸರ ಪ್ರೇಮಿಗಳು, ಶಾಲಾ ಕಾಲೇಜುಗಳು, ಸಂಘ-ಸAಸ್ಥೆಗಳು ಸಸಿಗಳನ್ನು ನೆಡುವ ಮೂಲಕ ಹಸಿರು ಪರಿಸರ ಸೃಷ್ಟಿಸಿ ಪ್ರಕೃತಿಗೆ ಕೊಡುಗೆ ನೀಡಿ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಸಸಿ ಬೆಳವಣಿಗೆಗೆ ಮಳೆಗಾಲ ಪೂರಕವಾಗಿದೆ. ಅಗತ್ಯ ಸಸಿ ಪಡೆದು ನೆಡುವ ಮೂಲಕ ಪರಿಸರ ಪ್ರೇಮ ಮೆರೆಯಲು ಬಿಂಕದಕಟ್ಟಿ ಹೈಟೆಕ್ ನರ್ಸರಿ ಕೇಂದ್ರ ಕೈ ಬೀಸಿ ಕರೆಯುತ್ತಿದೆ.