ಶಿವಮೊಗ್ಗ:- 72 ವರ್ಷದ ವೃದ್ಧನಿಗೆ 41 ಲಕ್ಷ ವಂಚನೆ ಮಾಡಿದ ಆರೋಪದಡಿ ಇಬ್ಬರು ನಕಲಿ ಸಿಬಿಐಗಳನ್ನು ಅರೆಸ್ಟ್ ಮಾಡಲಾಗಿದೆ.
ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರ ಬಂಧನವಾಗಿದೆ. ಬಂಧಿತರನ್ನು ಮೊಹಮ್ಮದ್ ಅಹಮದ್, ಅಭಿಷೇಕ್ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿಗಳು ನಗರದ ಗೋಪಾಳ ಬಡಾವಣೆ ನಿವಾಸಿ ಆನಂದ್ ಎಂಬವರಿಗೆ ಕರೆ ಮಾಡಿ ನಾವು ಸಿಬಿಐ ಅಧಿಕಾರಿಗಳು, ನಿಮ್ಮ ಆಧಾರ್ ಕಾರ್ಡ್ ನಂಬರಿನಿಂದ ದೊಡ್ಡ ಮಟ್ಟದ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದೇವೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿಯಾಗಿದೆ ಎಂದು ಬೆದರಿಸಿದ್ದರು.
ನಿಮ್ಮನ್ನು ಬಂಧಿಸಬಾರದು ಅಂದರೆ ಹಣ ಕೊಡಿ ಎಂದು ಹೆದರಿಸಿದ್ದರು. ಆನಂದ್ ಖಾತೆಯಿಂದ 41 ಲಕ್ಷ ರೂ. ಹಣವನ್ನು ಖದೀಮರು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಮೋಸ ಹೋಗಿರುವ ಬಗ್ಗೆ ಆನಂದ್ಗೆ ಅನುಮಾನ ಮೂಡಿದ್ದು, ಈ ಬಗ್ಗೆ ಶಿವಮೊಗ್ಗದ ಸೆನ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 23.89 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.