ಮಂಗಳೂರು:ಅಮೆರಿಕನ್ ಕಮಾಡಿಟೀಸ್ ಹೂಡಿಕೆಯಲ್ಲಿ ಹೆಚ್ಚಿನ ಲಾಭದ ಆಸೆಗೆ ಬಿದ್ದ ಮಂಗಳೂರಿನ 74 ವರ್ಷದ ವ್ಯಕ್ತಿಯೋರ್ವರು ಸುಮಾರು ₹1.77 ಕೋಟಿ ಹಣ ಕಳೆದುಕೊಂಡಿದ್ದಾರೆ. ವೆಂಟ್ರೇಡ್ ಎಂಬ ಕಂಪನಿಯಿಂದ ಶೋಯಬ್ ಘೌರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕಳೆದ ಡಿಸೆಂಬರ್ 24ರಂದು ಸಂತ್ರಸ್ತರಿಗೆ ಕರೆ ಮಾಡಿ ಅಮೆರಿಕನ್ ಕಮಾಡಿಟೀಸ್ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾನೆ.
ಭಾರತೀಯ ರೂಪಾಯಿಯನ್ನು ಅಮೆರಿಕನ್ ಡಾಲರ್ಗೆ ಪರಿವರ್ತಿಸಿ ಹೂಡಿಕೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾನೆ. ಇಮೇಲ್, ವಾಟ್ಸಾಪ್ ಹಾಗೂ ದೂರವಾಣಿ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಆರೋಪಿಗೆ ಮೊದಲ ಹಂತದಲ್ಲಿ ಸಂತ್ರಸ್ತರು ಸ್ವಲ್ಪ ಮೊತ್ತ ಹೂಡಿಕೆ ಮಾಡಿದ್ದರು. ಆ ಹಣಕ್ಕೆ ಸ್ವಲ್ಪ ಮಟ್ಟಿನ ಲಾಭ ಕೂಡ ಖಾತೆಗೆ ಜಮಾ ಆಗಿದ್ದರಿಂದ ವಿಶ್ವಾಸ ಹೆಚ್ಚಾಗಿದೆ.
ನಂತರ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಆರೋಪಿ ನೀಡಿದ ಬ್ಯಾಂಕ್ ಖಾತೆಗಳಿಗೆ ಆರ್ಟಿಜಿಎಸ್ (RTGS), ಎನ್ಇಎಫ್ಟಿ (NEFT) ಹಾಗೂ ಐಎಂಪಿಎಸ್ (IMPS) ಮೂಲಕ ದೊಡ್ಡ ಮೊತ್ತಗಳನ್ನು ವರ್ಗಾಯಿಸಲಾಗಿದೆ. ಜನವರಿ 5ರಿಂದ ಫೆಬ್ರವರಿ 2ರವರೆಗೆ ಒಟ್ಟು ₹1,77,64,668.22 ಹಣ ವರ್ಗಾವಣೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡ ಮೊತ್ತ ಕೈಸೇರಿದ ಬಳಿಕ ಆರೋಪಿ ಸಂಪರ್ಕ ಕಡಿತಗೊಳಿಸಿದ್ದಾನೆ. ವಂಚನೆಗೆ ಒಳಗಾಗಿರುವುದನ್ನು ಅರಿತ ಸಂತ್ರಸ್ತರು ಮಂಗಳೂರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



