ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು ಮತ್ತು ಯೋಧರ ಕುರಿತಂತೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೆಎಸ್‌ಎಂಸಿಎ ಅಧ್ಯಕ್ಷರೂ ಆದ ಸತೀಶ ಕೃಷ್ಣ ಸೈಲ್ ಅಭಿಪ್ರಾಯಪಟ್ಟರು.
ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಸಂಸ್ಥೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡು ಶತಮಾನಗಳಿಗೂ ಹೆಚ್ಚು ಕಾಲ ಬ್ರಿಟೀಷರ ದಬ್ಬಾಳಿಕೆಗೆ ಭಾರತ ನಲುಗಿ ಹೋಗಿತ್ತು. ರಾಷ್ಟ್ರಪಿತ ಮಹಾತ್ಮಾಗಾಂಧಿ ರವರ ನೇತೃತ್ವದಲ್ಲಿ ಅಸಂಖ್ಯಾತ ನಾಯಕರು ಮತ್ತು ಯೋಧರು ಮಾಡಿದ ತ್ಯಾಗ ಮತ್ತು ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಈ ಕುರಿತಂತೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಅಂತೆಯೇ ಭಾರತದ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆಗಳ ಕುರಿತಂತೆಯೂ ಅರಿವು ಮೂಡಿಸಬೇಕಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಅತೀಕುಲ್ಲಾ ಶರೀಫ್ ಮಾತನಾಡಿ, ಭಾರತವು ಸಾವಿರಾರು ವರ್ಷಗಳಿಂದಲೂ ಸಾಂಸ್ಕೃತಿಕ ಹಿರಿಮೆಗೆ ಪ್ರಸಿದ್ಧವಾಗಿದೆ. ಇಡೀ ವಿಶ್ವದಲ್ಲಿಯೇ ಭಾರತದ ಸಂಸ್ಕೃತಿಗೆ ಅಮೂಲ್ಯ ಸ್ಥಾನ ದೊರೆತಿದೆ. ಇಂಥಹ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನರು ನಡೆದುಬಂದ ಹಾದಿಯ ಕುರಿತಂತೆ ಮತ್ತು ಅವರ ತತ್ವಾದರ್ಶಗಳನ್ನು ನಾವು ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕರಾದ ಪಿ.ಎಸ್. ನಂದೀಶ ಮತ್ತು ಇತರೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.