ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ನಮ್ಮ ಯುವಶಕ್ತಿಯ ಬಲ ಅವಶ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ, ನಿಷ್ಠೆ, ಶಿಸ್ತು, ವಿಶ್ವಾಸ ಹಾಗೂ ಸ್ವಾವಲಂಬನೆಯಂತಹ ಗುಣಗಳನ್ನು ರೂಢಿಸಿಕೊಳ್ಳಬೇಕು. ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಕೊಡವಿಕೊಂಡು ಲಕ್ಷಾಂತರ ಜೀವಗಳ ತ್ಯಾಗ-ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಅದನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಪ್ರತಿಯೊಬ್ಬ ಪ್ರಜೆ ಮುಂದಾಗಬೇಕೆಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.
ಅವರು ಗುರುವಾರ ಶಿರಹಟ್ಟಿಯ ಶ್ರೀ ಎಸ್.ಎಂ. ಡಬಾಲಿ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತೀಯರ ಉದಾರತೆಯನ್ನು ಚೆನ್ನಾಗಿ ಅರಿತಿದ್ದ ಆಂಗ್ಲರು ತಮ್ಮ ಕುಟಿಲ ನೀತಿಯ ಒಳಸಂಚಿನಿಂದ ಧರ್ಮ, ಸಂಸ್ಕೃತಿ, ಭಾಷೆಯ ಆಧಾರದ ಮೇಲೆ ದೇಶೀಯರನ್ನು ವಿಘಟಿಸಿದರು. ಇದನ್ನು ಗಮನಿಸಿದ ಅನೇಕ ಮಹನೀಯರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದರು. ಇಂತಹವರನ್ನು ಇಂದಿನ ದಿವಸ ನಾವೆಲ್ಲರೂ ಸ್ಮರಿಸಬೇಕು. ಜಾತಿ, ಧರ್ಮ, ಭಾಷೆಗಳನ್ನು ಮೀರಿ ಸುಖ-ಶಾಂತಿ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದರು.
ಶಾಸಕ ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ನಾಗರಾಜ ಮಾಡಳ್ಳಿ, ತಾ.ಪಂ ಇಓ ಎಸ್.ಎಸ್. ಕಲ್ಮನಿ, ಬಿಇಓ ಎಚ್.ಎನ್. ನಾಯಕ, ಪ.ಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಎಡಿಎ ರೇವಣೆಪ್ಪ ಮನಗೂಳಿ, ಆರ್‌ಎಫ್‌ಓ ಕೌಶಿಕ ದಳವಾಯಿ, ರಾಮಪ್ಪ ಪೂಜಾರ, ಎಂ.ಕೆ. ಲಮಾಣಿ, ನಾಗರಾಜ ಲಕ್ಕುಂಡಿ, ಹೊನ್ನಪ್ಪ ಶಿರಹಟ್ಟಿ, ಫಕ್ಕೀರೇಶ ರಟ್ಟಿಹಳ್ಳಿ, ಅಶರತ ಢಾಲಾಯತ, ಗೂಳಪ್ಪ ಕರಿಗಾರ, ಎಚ್.ಆರ್. ಬೆನಹಾಳ, ಎಚ್.ಎಂ. ದೇವಗಿರಿ, ನಂದಾ ಪಲ್ಲೇದ, ಶ್ರೀನಿವಾಸ ಬಾರಬಾರ, ಅಕ್ಬರ ಯಾದಗಿರಿ, ಬಸವರಾಜ ಕಾತರಾಳ ಮುಂತಾದವರು ಉಪಸ್ಥಿತರಿದ್ದರು.