ವಿಜಯಸಾಕ್ಷಿ ಸುದ್ದಿ, ನರೇಗಲ್ : ಮಳೆ, ಗಾಳಿ, ಛಳಿ ಎನ್ನದೆ ದಿನದ 24 ಗಂಟೆ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಯೋಧರು ನಿಜವಾಗಿಯೂ ನಮ್ಮ ದೇಶದ ಸಂಪತ್ತು. ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ನಮ್ಮೆಲ್ಲರನ್ನೂ ಕಾಯುತ್ತಿರುವ ದೇಶದ ಯೋಧರಿಗೆ ಇಂದು ನಾವು ಗೌರವವನ್ನು ಸಮರ್ಪಿಸಬೇಕೆಂದು ಪಟ್ಟಣದ ಪಿ.ಎಸ್.ಎಸ್. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ. ಕೆ.ಬಿ. ಧನ್ನೂರ ಹೇಳಿದರು.
ಪಟ್ಟಣದ ಡಾ. ಕೆ.ಬಿ. ಧನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರೂ, ವಲ್ಲಭ್‌ಭಾಯಿ ಪಟೇಲ, ಸರೋಜಿನಿ ನಾಯ್ಡು, ಬಾಲಗಂಗಾಧರ ತಿಲಕ ಹೀಗೆ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರ ಹೋರಾಟದಿಂದ ದೊರೆತ ಈ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಂಡು ಹೋಗಬೇಕಿದೆ. ಇಂದಿನ ದಿನಗಳಲ್ಲಿ ಪ್ರಜಾಭುತ್ವದ ಅಂಗಗಳೂ ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ. ಇದ್ದುದರಲ್ಲಿಯೇ ನ್ಯಾಯಾಂಗವು ತನ್ನ ಸಮರ್ಪಕ ಕಾರ್ಯದ ಮೂಲಕ ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಾದ ನೀವುಗಳೂ ಸಹ ಉತ್ತಮ ನಾಗರಿಕರಾಗಿ ಈ ದೇಶದ ಸೇವೆಗ ನಿಮ್ಮನ್ನು ನೀವು ಅರ್ಪಿಸಿಕೊಳ್ಳಿ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿ, ಇಂದಿನ ಯುವಕರು ನಾಳಿನ ನಾಗರಿಕರು. ಈ ಮಾತನ್ನು ನೀವೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಮಾಜಿ ಯೋಧ ಶಿವಪುತ್ರಪ್ಪ ಸಂಗನಾಳ, ನಿವೃತ್ತ ಶಿಕ್ಷಕ ಹಳ್ಳೂರ ಮಾತನಾಡಿದರು. ವೇದಿಕೆಯ ಮೇಲೆ ಸಂಸ್ಥೆಯ ಸದಸ್ಯರಾದ ಪ್ರಕಾಶ ಪಲ್ಲೇದ, ವೀರಣ್ಣ ಹುಯಿಲಗೋಳ, ಮಾಜಿ ಯೋಧ ವೀರಪ್ಪ ಕುಂಬಾರ, ಮಾಜಿ ಯೋಧ ಎಂ.ಎ. ಸಂಗನಾಳ ಮುಂತಾದವರಿದ್ದರು.
ಸಂಸ್ಥೆಯ ಉಪಾಧ್ಯಕ್ಷೆ ಕಸ್ತೂರಿ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಎಸ್.ಎಚ್. ಮಲ್ಲನಗೌಡ್ರ ಸ್ವಾಗತಿಸಿದರು. ಶಿಕ್ಷಕಿ ವಿಶಾಲಾಕ್ಷಿ ಶಾಸೆಟ್ಟಿ ನಿರೂಪಿಸಿದರು. ಮಕ್ಕಳಿಂದ ಹಾಡು, ಭಾಷಣ, ಮನರಂಜನೆಗಳು ನಡೆದವು. ಶಿಕ್ಷಕಿ ಕವಿತಾ ಬಂಡಿ ವಂದಿಸಿದರು.