ವಿಜಯಸಾಕ್ಷಿ ಸುದ್ದಿ, ಗದಗ: ಸರ್ವೋಚ್ಛ ನ್ಯಾಯಾಲಯ ನವದೆಹಲಿ, ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಗದಗ ಜಿಲ್ಲೆಯಲ್ಲಿ ಡಿ. 13ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 14 ಬೆಂಚ್‌ಗಳನ್ನು ರಚಿಸಿ ರಾಜೀ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ನ್ಯಾಯಾಲಯದಲ್ಲಿರುವ 4560 ಚಾಲ್ತಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ. 52487 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 57047 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಇತ್ಯರ್ಥಗೊಂಡ ಪ್ರಕರಣಗಳಲ್ಲಿ 45 ಮೋಟಾರು ವಾಹನ ಅಪಘಾತ ಪ್ರಕರಣಗಳು ಮತ್ತು ದರಖಾಸ್ತು ಪ್ರಕರಣಗಳು, 87 ಚೆಕ್‌ಬೌನ್ಸ್ ಪ್ರಕರಣಗಳು, 111 ಕ್ರಿಮಿನಲ್ ಕಂಪೌಂಡಬಲ್ ಪ್ರಕರಣಗಳು, 129 ಪಾಲು ವಿಭಾಗ ಪ್ರಕರಣಗಳು, 32 ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು, 3 ವೈವಾಹಿಕ ಪ್ರಕರಣಗಳು, 61 ವಿದ್ಯುತ್ ಕಾಯ್ದೆ ಪ್ರಕರಣಗಳು, 15 ಎಲ್.ಎ.ಸಿ ದರಖಾಸ್ತ ಪ್ರಕರಣಗಳು ಸೇರಿದಂತೆ ಒಟ್ಟು 4560 ಚಾಲ್ತಿ ಪ್ರಕರಣಗಳನ್ನು ಒಟ್ಟು ರೂ.123136009ಗಳಿಗೆ ಪರಿಹಾರ ಒದಗಿಸುವುದರ ಮೂಲಕ ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ.
ಗದಗದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನಾಗವೇಣಿ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೀತಾ ಶಿಂಧೆ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗಂಗಾಧರ ಸಿ.ಎಂ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ವ ಸಿಜೆಎಂ ಜಿ.ಆರ್. ಶೆಟ್ಟರ, ಜೆಎಂಎಫ್‌ಸಿ 1ನೇ ನ್ಯಾಯಾಲಯದ ದಿವಾಣಿ ನ್ಯಾಯಾಧೀಶರಾದ ಶಿಲ್ಪಾ ತಿಮ್ಮಾಪುರ, ಜೆಎಂಎಫ್‌ಸಿ 2ನೇ ನ್ಯಾಯಾಲಯದ ದಿವಾಣಿ ನ್ಯಾಯಾಧೀಶರಾದ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್.ಜಿ. ಕಲ್ಲೂರ, ಉಪಾಧ್ಯಕ್ಷರಾದ ಎಂ.ಎ. ಸಂಗನಾಳ ಹಾಗೂ ಪದಾಧಿಕಾರಿಗಳು, ಸರ್ಕಾರಿ ಅಭಿಯೋಜಕರಾದ ಸವಿತಾ ಎಂ. ಶಿಗ್ಲಿ, ಜಿಲ್ಲಾ ಸರ್ಕಾರಿ ವಕೀಲರಾದ ಎಂ.ಎನ್. ಕುಕನೂರ, ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಜಿ.ಬಿ. ನೀಲರಡ್ಡಿ ಹಾಗೂ ವಕೀಲ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಹಾಗೂ ಎಲ್ಲಾ ನ್ಯಾಯಾಲಯಗಳ ಸಿಬ್ಬಂದಿವರ್ಗ ಉಪಸ್ಥಿತರಿದ್ದು, ಲೋಕ ಅದಾಲತ್ ಯಶಸ್ವಿಗೊಳಿಸಿದರು.
ಎಲ್ಲಾ ತಾಲೂಕಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು, ಸಿಬ್ಬಂದಿವರ್ಗ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕೂಡಾ ಆಯಾ ತಾಲೂಕಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ರಾಜೀ ಸಂಧಾನ ಯಶಸ್ವಿಗೊಳಿಸಿದರು.
ರಾಷ್ಟ್ರೀಯ ಲೋಕ ಅದಾಲತ್‌ಗೆ ಸಹಕಾರ ನೀಡಿದ ವಕೀಲ ವೃಂದದವರಿಗೆ, ಪಕ್ಷಗಾರರಿಗೆ, ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ, ಸಿಬ್ಬಂದಿ ವರ್ಗದವರಿಗೆ, ಜಿಲ್ಲಾ ನ್ಯಾಯಾಲಯದ ತಾಂತ್ರಿಕ ಸಿಬ್ಬಂದಿ ವರ್ಗದವರಿಗೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಸರ್ಕಾರಿ ವಕೀಲರಿಗೆ, ಅಪರ ಜಿಲ್ಲಾ ಸರ್ಕಾರಿ ವಕೀಲರಿಗೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಗೆ, ಅಭಿಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ವಿಮೆ ಕಂಪನಿಯವರಿಗೆ, ಉಪವಿಭಾಗಾಧಿಕಾರಿಗಳಿಗೆ, ಗದಗ ಬೆಟಗೇರಿ ನಗರಸಭೆ, ನಗರಯೋಜನಾ ಕೋಶ, ಬಿಎಸ್‌ಎನ್‌ಎಲ್, ಅಬಕಾರಿ ಇಲಾಖೆ, ಬ್ಯಾಂಕ್, ವಾರ್ತಾ ಇಲಾಖೆಯವರಿಗೆ ಹಾಗೂ ಎಲ್ಲಾ ಮಾಧ್ಯಮದವರಿಗೆ, ಲೋಕ ಅದಾಲತ್‌ಗೆ ಸಹಕಾರ ನೀಡಿದ ಎಲ್ಲರಿಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ 120 ವಿವಿಧ ಬ್ಯಾಂಕ್ ಪ್ರಕರಣಗಳು ಸೇರಿದಂತೆ ಒಟ್ಟು 52487 ವ್ಯಾಜ್ಯಪೂರ್ವ ಪ್ರಕರಣಗಳು ರೂ.32576953ಗಳಿಗೆ ರಾಜೀ ಸಂಧಾನವಾಗಿದೆ. ವಿಶೇಷವಾಗಿ ಗದುಗಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ 4 ಪ್ರಕರಣ ಹಾಗೂ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ 4 ಪ್ರಕರಣದಲ್ಲಿ ದಂಪತಿಗಳನ್ನು ಪುನಃ ಒಂದುಗೂಡಿಸಿ ಹಾರ ಬದಲಾಯಿಸಿ ಕಳುಹಿಸಿಕೊಡಲಾಯಿತು. ಒಟ್ಟು 8 ಜೋಡಿಗಳು ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪುನಃ ಒಂದುಗೂಡಿ ಹೋಗಿದ್ದು ವಿಶೇಷವಾಗಿದೆ.



