ವಿಜಯಸಾಕ್ಷಿ ಸುದ್ದಿ, ಗದಗ : ಮಾನವ ಕುಲದಲ್ಲಿ ನಂಬಿಕೆ ಇದ್ದವರಿಗೆ ವೀರೇಶ್ವರ ಪುಣ್ಯಾಶ್ರಮ ಕೈಬೀಸಿ ಕರೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳವರ 80ನೇ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೆಯ ಅಂಗವಾಗಿ ಜರುಗಿದ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಮಾರು 50-60 ವರ್ಷಗಳ ನಂತರ ಮಾನವ ಹಕ್ಕುಗಳ ಕಾಯ್ದೆಗಳು ಜಾರಿಗೆ ಬಂದವು. ಆದರೆ, ಇದಕ್ಕೂ ಮುನ್ನ ಉಭಯ ಗುರುಗಳು ವೀರೇಶ್ವರ ಪುಣ್ಯಾಶ್ರಮದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತಂದು ಅಂಧರಿಗೆ, ಅನಾಥರಿಗೆ, ನಿರ್ಗತಿಕರಿಗೆ ಶಿಕ್ಷಣ, ಸಂಗೀತ ವಿದ್ಯೆ ನೀಡಿ ಅವರಿಗೆ ಸ್ವಾವಲಂಬಿ ಜೀವನ ರೂಪಿಸಿದ್ದಾರೆ ಎಂದರು.
ಮಾನವ ಹಕ್ಕುಗಳನ್ನು ಗೌರವಿಸುವ ಕೆಲಸ ಪುಣ್ಯಾಶ್ರಮ ಮಾಡಿದೆ. ಪಂ.ಪಂಚಾಕ್ಷರಿ ಗವಾಯಿಗಳವರು ಪುಣ್ಯಾಶ್ರಮವನ್ನು ಕಟ್ಟಿದರೆ, ಪಂ.ಪುಟ್ಟರಾಜ ಗವಾಯಿಗಳವರು ಈ ಆಶ್ರಮವನ್ನು ರಾಷ್ಟಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದ್ದಾರೆ. ಅದ್ದರಿಂದ ವೀರೇಶ್ವರ ಪುಣ್ಯಾಶ್ರಮ ನಮ್ಮೆಲ್ಲರ ಪುಣ್ಯಕ್ಷೇತ್ರವಾಗಿದೆ. ಅಲ್ಲದೆ, ನಾಡಿನಲ್ಲಿ ಅತೀ ಹೆಚ್ಚು ತುಲಾಭಾರ ಸೇವೆ ನಡೆದಿದ್ದರೆ ಅದು ಪಂ.ಪುಟ್ಟರಾಜ ಗವಾಯಿಗಳವರದ್ದಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ,
ಯಾರು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಾರೆಯೋ ಅವರನ್ನು ಸಮಾಜವು ಸದಾ ಸ್ಮರಿಸುತ್ತದೆ. ಉಭಯ ಶ್ರೀಗಳು ವಿರೇಶ್ವರ ಪುಣ್ಯಾಶ್ರಮ ನಿರ್ಮಾಣ ಮಾಡಿ ಭಿಕ್ಷಾಟನೆಯಲ್ಲಿ ತೊಡಗಬೇಕಾಗಿದ್ದ ಸಾವಿರಾರು ಅಂಧ- ಅನಾಥರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಪುಣ್ಯಾಶ್ರಮದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲರೂ ಸಹಾಯ, ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಅಂಧ-ಅನಾಥರನ್ನು ಸಾಕಿ ಸಲುಹಿ, ಪೋಷಣೆ ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಪುಣ್ಯಾಶ್ರಮ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಶ್ರೀಮಠದ ಜ. ತೋಂಟದ ಡಾ. ಸಿದ್ದರಾಮ ಮಾಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಮುರಘಾಮಠದ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ಗುಳೇದಗುಡ್ಡ ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಎಚ್.ಎಸ್. ವೆಂಕಟಾಪೂರ-ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಂ.ಪುಟ್ಟರಾಜ ಕವಿ ಗವಾಯಿಗಳು ರಚಿಸಿದ `ಭಾವ ಮಂದಾಕಿನಿ’ ಗ್ರಂಥ ಹಾಗೂ ಪೂಜ್ಯಶ್ರೀ ಕಲ್ಲಯ್ಯಜ್ಜನವರು ರಚಿಸಿದ `ಚುಟುಕು ಸಾಹಿತ್ಯ’ ಕೃತಿಗಳು ಲೋಕಾರ್ಪಣೆಗೊಂಡವು.
ಪಂ. ಪುಟ್ಟರಾಜ ಕವಿ ಗವಾಯಿಗಳಿಗೆ ಈಗಾಗಲೇ ಭಾರತರತ್ನ ಸಿಗಬೇಕಾಗಿತ್ತು ಎನ್ನುವ ಕೊರಗು ನನಗೂ ಇದೆ. ಈ ಬಾರಿ ನಾವೇಲ್ಲರೂ ಕೂಡಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸೋಣ. ಈ ಬಾರಿ ಗುರುಗಳಿಗೆ ಭಾರತ ರತ್ನ ಸಿಗುತ್ತದೆ ಎನ್ನುವ ಭರಸವೆ ಇದೆ.
– ಎಸ್.ವಿ. ಸಂಕನೂರ.
ವಿಪ ಸದಸ್ಯರು.