ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ತಾಲೂಕಿನ ವಾಸನ ಗ್ರಾಮದಲ್ಲಿ ಪ್ರಮುಖ ರಸ್ತೆಯೊಂದು ಹಾಳಾಗಿ ತಿಂಗಳು ಕಳೆದರೂ ದುರಸ್ತಿಗಾಗಿ ಗ್ರಾಪಂ ಅಥವಾ ಸಂಬಂಧಿಸಿದ ಅಧಿಕಾರಿಗಳು ಕಾರ್ಯೋನ್ಮುಖರಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿಕೊಡಲು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ತಗ್ಗು ದಿಣ್ಣೆಗಳಿಂದ ತುಂಬಿದ ರಸ್ತೆಯನ್ನು ವಾಹನ ಸಂಚಾರಕ್ಕೆ ಗ್ರಾಮಸ್ಥರು ಬಳಸುವುದನ್ನೇ ತಟಸ್ಥಗೊಳಿಸಿದ್ದಾರೆ. ಸಮಸ್ಯೆ ಪರಿಶೀಲಿಸಿ ರಸ್ತೆ ದುರಸ್ತಿಗೊಳಿಸಬೇಕು. ಇದರಿಂದ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ರಸ್ತೆ ಮತ್ತು ಗ್ರಾಮದ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರೆತಿರಲಿಲ್ಲ. ಪ್ರಸಕ್ತ ಒಂದು ಕೋಟಿ ರೂ. ಅನುದಾನ ದೊರೆತಿದೆ. ಇದರಲ್ಲಿ ರಸ್ತೆ ಕಾಮಗಾರಿ ಮತ್ತು ಗ್ರಾಮದಲ್ಲಿ ಸಮುದಾಯ ಭವನ ಮತ್ತು ಎರಡು ಯುವಕ ಮಂಡಳ ಕಟ್ಟಡ, ಚರಂಡಿ ಕಾಮಗಾರಿ, ಗ್ರಾಮದ ಎರಡು ಭಾಗದಲ್ಲಿ ಹೈಮಾಸ್ಕ್ ಅಳವಡಿಕೆ, ಗ್ರಾಪಂ ಕಾರ್ಯಾಲಯದಲ್ಲಿ ಕೊಠಡಿ ನಿರ್ಮಾಣಕ್ಕಾಗಿ ಅನುದಾನ ಲಭ್ಯವಾಗಿದೆ.
ಹಂತ ಹಂತವಾಗಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಸ್ತೆ ಕಾಮಗಾರಿ ಭೂಸೇನಾ ನಿಗಮದವರಿಗೆ ವಹಿಸಲಾಗಿದ್ದು, ಅವರು ಕಳೆದ ಎರಡು ದಿನಗಳಿಂದ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಗ್ರಾಪಂ ಪಿಡಿಒ ಎಂ.ಎ. ವಾಲಿ ತಿಳಿಸಿದ್ದಾರೆ.
ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
Advertisement