ಸರ್ವರಿಗೂ ಆರೋಗ್ಯವೇ ಭದ್ರ ಬುನಾದಿ : ವಾಸುದೇವರಡ್ಡಿ ಮೇಕಳಿ

0
health day
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ದೈನಂದಿನ ಬದುಕು ಪ್ರಾರಂಭವಾಗುವದೇ ಆರೋಗ್ಯದಿಂದ. ಆರೋಗ್ಯ ಇಲ್ಲದಿದ್ದರೆ ಬದುಕು ಶೂನ್ಯವೆನಿಸುವುದು. ಅಂತೆಯೇ `ಆರೋಗ್ಯವೇ ಭಾಗ್ಯ’ವೆಂದು ಎಲ್ಲರೂ ಹೇಳುತ್ತಾರೆ.

Advertisement

ಒಬ್ಬ ವ್ಯಕ್ತಿಯ ಇಂದ್ರಿಯಗಳು ಯಾವುದೇ ದೋಷವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದರೆ ಆ ವ್ಯಕ್ತಿ ಆರೋಗ್ಯವಂತನೆಂದು ತಿಳಿಯುತ್ತೇವೆ. ಒಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದು ಅನಾರೋಗ್ಯ ಪೀಡಿತನಾದರೆ ಪ್ರಯೋಜನವೇನು? ಒಂದು ಕಟ್ಟಡ ಗಟ್ಟಿಯಾಗಿ ನಿಲ್ಲಲು ಅದರ ತಳಪಾಯ ಭದ್ರವಾಗಿರಬೇಕು. ಹೀಗೆಯೇ ಜೀವಿಯು ಹೆಚ್ಚು ಕಾಲ ಬಾಳಿ ಬದುಕಲು, ಕ್ರಿಯಾಶೀಲನಾಗಿರಲು ಆರೋಗ್ಯ ಬೇಕೇಬೇಕು. ಈ ಹಿನ್ನೆಲೆಯಲ್ಲಿ ಸರ್ವ ಕಾರ್ಯಗಳ ಸಾಧನೆ ಸಿದ್ಧಿಗಾಗಿ ಆರೋಗ್ಯವೇ ಭದ್ರ ಬುನಾದಿಯಾಗಿದೆ ಎಂದು ನಿವೃತ್ತ ಇಂಜಿನಿಯರ್ ವಾಸುದೇವರಡ್ಡಿ ಮೇಕಳಿ ಅಭಿಪ್ರಾಯಪಟ್ಟರು.

ಇಲ್ಲಿನ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ 528ನೇ `ಅನ್ವೇಷಣೆ’ ಕಾರ್ಯಕ್ರಮ, ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಮಕ್ಕಳಿಂದ ಮೊದಲ್ಗೊಂಡು ಬಹುತೇಕ ಜನತೆ ದುಶ್ಚಟಗಳಿಗೆ ಮಾರುಹೋಗಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ನಾವೆಲ್ಲರೂ ಆರೋಗ್ಯವಂತರಾಗಿರಬೇಕಾದರೆ ದುಶ್ಚಟಗಳಿಂದ ದೂರವಿರಬೇಕೆಂದು ತಿಳಿಸಿದರು.
ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷೆ ವಿಜಯಾ ಚನ್ನಶೆಟ್ಟಿ ಮಾತನಾಡಿ, ಮೊದಲು ಅಡುಗೆ ಮನೆ ಆರೋಗ್ಯಯುತವಾಗಿರಬೇಕು. ಅಂದರೆ ಮಹಿಳೆ ಆರೋಗ್ಯಯುತ ಆಹಾರ ತಯಾರಿಸಿದರೆ ಅಂಥ ಆಹಾರ ಸೇವಿಸಿದವರೆಲ್ಲರೂ ಆರೋಗ್ಯವಂತರಾಗಿರುತ್ತಾರೆ. ಹೀಗಾಗಿ ಮಹಿಳೆಯರು ಆರೋಗ್ಯದ ಮಹತ್ವವನ್ನು ತಿಳಿಯಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗ ಪಾಠಶಾಲೆಯ ನಿತ್ಯಯೋಗ ಸಾಧಕರು, ಸದಸ್ಯರು ಹೆಚ್ಚಿನ ಉಪಸ್ತಿತರಿದ್ದರು. ವೀಣಾ ಮಾಲಿಪಾಟೀಲ ಪ್ರಾರ್ಥಿಸಿದರು. ವೀಣಾ ಗೌಡರ ಸ್ವಾಗತ ಕೋರಿದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ಮೇಕಳಿ ವಂದಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಡಿ.ಜಿ.ಎಂ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಮಾತನಾಡಿ, ಕೇವಲ ವಿಶ್ವ ಆರೋಗ್ಯ ದಿನಾಚರಣೆಯಿಂದ ನಾವೆಲ್ಲ ಆರೋಗ್ಯವಂತರಾಗಿರುವುದು ಅಸಾಧ್ಯ. ಅದಕ್ಕಾಗಿ ನಾವು ವಿದ್ಯಾರ್ಥಿಗಳಲ್ಲಿ, ನೆರೆಹೊರೆಯವರಲ್ಲಿ, ಸಮಾಜದಲ್ಲಿ ಆರೋಗ್ಯದ ಅರಿವು ಮೂಡಿಸಬೇಕು. ಈ ಕಾರ್ಯ ನನ್ನದಲ್ಲ ಎಂದು ಭಾವಿಸದೇ ಆರೋಗ್ಯ ಜಾಗೃತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಭಿಕರಿಗೆ ತಿಳಿದಿದರಲ್ಲದೆ, ಈ ಕಾರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿರುವೆ ಎಂದು ಹೆಮ್ಮೆಯಿಂದ ತಿಳಿಸಿದರು.


Spread the love

LEAVE A REPLY

Please enter your comment!
Please enter your name here