ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಕುಟುಂಬ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹಾಡಹಗಲೇ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಪಟ್ಟಣದ ಅಂಚೆ ಕಚೇರಿ ಸಮೀಪ ಬುಧವಾರ ಜರುಗಿದೆ.
ಗೀತಾ ಬೇಲೂರಪ್ಪ ಪೂಜಾರ (35) ಹಲ್ಲೆಗೊಳಗಾದ ಅಂಚೆ ಸಹಾಯಕಿ. ಮುಂಡರಗಿ ಪಟ್ಟಣದ ಅಂಚೆ ಕಚೇರಿಯಲ್ಲಿ ಗೀತಾ ಕರ್ತವ್ಯ ನಿರ್ವಹಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಮಚ್ಚಿನಿಂದ ಹಲ್ಲೆ ಮಾಡಿದ ಪರಿಣಾಮ ಮಹಿಳೆಯ ಕತ್ತು ಹಾಗೂ ಕೈಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಕೆಲ ಹೊತ್ತು ಸ್ಥಳದಲ್ಲಿ ನರಳಾಡಿದ್ದಾಳೆ.
ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಂಭೀರವಾಗಿ ಗಾಯಗೊಂಡ ಗೀತಾಳನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆರೋಪಿ ಬೇಲೂರಪ್ಪ ಗಜೇಂದ್ರಗಡದಲ್ಲಿ ಟೈಲ್ಸ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.