ದಂಪತಿಗಳು ಅರಿತು-ಬೆರೆತು ನಡೆಯಬೇಕು

0
mass marrage
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಂಸಾರ ಹೇಗಿರಬೇಕೆಂದರೆ, ಹೆಣ್ಣು ಗಂಡನನ್ನು, ಗಂಡು ಹೆಣ್ಣನ್ನು ಅರಿತು-ಬೆರೆತು ನಡೆದರೆ ಅಧ್ಯಾತ್ಮದ ಕಾವೇರಿ ಆಗುತ್ತಾಳೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲು ಹೆಣ್ಣು ಮುಖ್ಯವಾಗಿರುತ್ತಾಳೆ. ಕಳಸಾಪೂರ ಗ್ರಾಮದ ಜನತೆ ಧಾರ್ಮಿಕ ಹಾಗೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಣಕವಾಡ ದೇವಮಂದಿರ ಮಠದ ಅಭಿನವ ಪೂಜ್ಯಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ತಾಲೂಕಿನ ಕಳಸಾಪೂರ ಗ್ರಾಮದ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 21 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ನಾಡಿನೊಳಗೆ ಶರೀಪ ಶಿವಯೋಗಿಗಳು, ಸಿದ್ದಾರೂಢರು, ನವಲಗುಂದ ನಾಗಲಿಂಗ ಶಿವಯೋಗಿಗಳು, ಎಮ್ಮಿಗನೂರ ಜಡೆಸಿದ್ದರು, ಚಳಗುರ್ಕಿ ಯರಿ ತಾತನವರು ಸಂಸಾರದ ಮೇಲೆ ಸವಾರಿ ಮಡಿದ್ದಾರೆ. ಅಂತೇಯ ಲೋಕ ಪೂಜ್ಯರಾಗಿದ್ದಾರೆ. ನೀವು ಸಂಸಾರಕ್ಕೆ ಅಂಟಿಕೊಳ್ಳದೆ ಸಂಸಾರದಲ್ಲಿದ್ದುಕೊಂಡು ಸದ್ಗತಿ ಪಡೆಯಬೇಕು. ಸಮಾಜಕ್ಕೆ ಒಳ್ಳೆಯ ಮಕ್ಕಳನ್ನು ಹೆತ್ತು ಕೊಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶಿವಗಂಗಾ ಕ್ಷೇತ್ರದ ಪೂಜ್ಯಶ್ರೀ ಮಲಯ ಶಾಂತಮುನಿ ಶಿವಾಚಾರ್ಯರು ಮಾತನಾಡಿ, ಮದುವೆ ಸ್ವರ್ಗಲೋಕದಲ್ಲಿ ನಿಶ್ಚಯವಾಗಿರುತ್ತದೆ. ಅವರನ್ನು ಭೂಲೋಕದಲ್ಲಿ ಹುಡುಕಿ ಮದುವೆ ಮಾಡುವದು ನಮ್ಮ ಕರ್ತವ್ಯವಾಗಿದೆ. ಅದ್ದರಿಂದ ಮದುವೆಗೆ ಬ್ರಹ್ಮಗಂಟು ಎನ್ನುತ್ತಾರೆ. ಗಂಡ-ಹೆಂಡತಿ ಅರಿತು ಜೀವನ ನಡೆಸಬೇಕು. ಕಳಸಾಪೂರ ಗ್ರಾಮ ಗದುಗಿಗೆ ಕಳಸವಿದ್ದಂತೆ. ಇಂತಹ ಪುರಾತನ ಕಾಲದ ಈಶ್ವರ-ಬಸವಣ್ಣ ದೇವರ ಜಾತ್ರಾ ಮಹೋತ್ಸವವನ್ನು 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ. ಈ ಜಾತ್ರಾ ಮಹೋತ್ಸವದ ರೂವಾರಿ ಲಿಂ. ಶ್ರೀಪಾದಯ್ಯ ಇಟಗಿಮಠ ಅವರ ಚಿಂತನಾಶಕ್ತಿಯಿಂದ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.

ಸಮ್ಮುಖ ವಹಿಸಿದ್ದ ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಓಂಕಾರಗಿರಿ ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಫಕೀರೇಶ್ವರ ಶಿವಾಚಾರ್ಯರು, ನಾಗರಾಳ ಬಸವಧರ್ಮ ಮಠದ ಪೂಜ್ಯಶ್ರೀ ಶಾಂತವೀರ ಮಹಾಸ್ವಾಮೀಜಿ, ರವುಡಕುಂದ ಸಿದ್ದಾಶ್ರಮದ ಡಾ. ಸಿದ್ರಾಮೇಶ್ವರ ಶರಣರು, ಗಜೇಂದ್ರಗಡದ ವೇ.ಮೂ. ಚಂದ್ರಶೇಖರ ಶರಣರು, ಕೋಟ್ನಿಕಲ್ ಸಂಗಮೆಶ್ವರಮಠದ ಸಂಗಯ್ಯ ತಾತನವರು ಮಾತನಾಡಿದರು.

ವೇದಿಕೆ ಮೇಲೆ ಜಾತ್ರಾ ಮಹೋತ್ಸವದ ಅಧ್ಯಕ್ಷ ನಿಂಗಯ್ಯ ಇಟಗಿಮಠ, ವಿಜಯಪುರದ ನಿವೃತ್ತ ಡಿವೈಎಸ್‌ಪಿ ಬಿ.ಆರ್. ಚೌಕಿಮಠ, ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡ್ರ, ಬೆಳದಡಿಯ ಶಂಭುಲಿಂಗಯ್ಯಸ್ವಾಮಿ ಕಲ್ಮಠ, ಕಳಸಾಪೂರ ಗ್ರಾ.ಪಂ ಅಧ್ಯಕ್ಷೆ ಅನಸೂಯಾ ಪಾಟೀಲ, ಪಿ.ಸಿ. ಹಿರೇಮಠ, ಬಿ.ಆರ್. ದೇವರಡ್ಡಿ, ಉದಯಕುಮಾರ ದೇಸಾಯಿ, ಸಿ.ಬಿ. ಪಲ್ಲೇದ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕಳಸಾಪೂರ ಗ್ರಾ.ಪಂ ಮಾಜಿ ಮತ್ತು ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಬಸಯ್ಯಸ್ವಾಮಿ ಇಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತಾ ಬಡಿಗೇರ ಪ್ರಾರ್ಥಿಸಿದರು. ಶರಣಶ್ರೀ ಶಿವಲಿಂಗಯ್ಯಶಾಸ್ತಿçಗಳು ಹಿರೇಮಠ ಸಿದ್ದಾಪೂರ ಅವರು ಕಾರ್ಯಕ್ರಮ ನಿರೂಪಿಸಿದರು. ನಂತರ ಮಹಾರಥೋತ್ಸವ, ರಾತ್ರಿ 8 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಿತು.

ಮದುವೆ ಎಂದರೆ ಹೆಣ್ಣು ಮತ್ತು ಗಂಡಿಗೆ ಲಾಟರಿ ಇದ್ದ ಹಾಗೆ. ಕೆಲವು ಜನರು ಸಂಸಾರದ ಮೇಲೆ ಸವಾರಿ ಮಾಡುತ್ತಾರೆ, ಮತ್ತೆ ಕೆಲವರ ಮೇಲೆ ಸಂಸಾರವೇ ಸವಾರಿ ಮಾಡುತ್ತದೆ. ಗ್ರಾಮದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಂಡು ಬಡವರ ಭಾರವನ್ನು ಇಳಿಸುವ ಕಾರ್ಯ ಮಾಡಿರುವುದು ಸಂತಸ ತಂದಿದೆ ಎಂದು ಅಭಿನವ ಪೂಜ್ಯಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.


Spread the love

LEAVE A REPLY

Please enter your comment!
Please enter your name here