ಈ ಜಗತ್ತಿನಲ್ಲಿ ವಿವಿಧ ಭಾಷೆಗಳನ್ನು ಮಾತನಾಡುವ ಅನೇಕ ಸಮುದಾಯಗಳ ಜನರು, ತಮ್ಮದೇ ಆದ ವೇಷ-ಭೂಷಣಗಳಿಂದ ಪಾರಂಪರಿಕ ಸಂಸ್ಕೃತಿ, ಸಂಪ್ರದಾಯಗಳಿಂದ ಗುರುತಿಸಿಕೊಂಡಿರುವ ಹಾಗೆ ವಿವಿಧ ಧರ್ಮಗಳನ್ನು ಪಾಲಿಸುವ ಮೂಲಕ ಮತ್ತು ಧಾರ್ಮಿಕ ದೇವಾನುದೇವತೆಗಳನ್ನು ಪೂಜಿಸುವ ವಿಶೇಷವಾಗಿ ಕಾಣುತ್ತಾರೆ. ಅದೆಷ್ಟೇ ಆಧುನಿಕ ದೇಶವಾದರೂ ಅಲ್ಲಿನ ಜನತೆ ಯಾವುದಾದರೂ ಒಂದು ಧರ್ಮವನ್ನು ನಂಬಿಕೊಂಡು ಬಂದಿರುತ್ತಾರೆ.
ಇಸ್ಲಾಂ ಧರ್ಮದ ಅನುಯಾಯಿಗಳನ್ನು ಮುಸ್ಲಿಮರು ಎಂದು ಕರೆಯಲಾಗುತ್ತದೆ. ಮುಸ್ಲಿಮರು ಎಂದರೆ ದೇವರ ಇಚ್ಛೆಗೆ ಶರಣಾದವರು ಎಂದರ್ಥ. ಕ್ರೈಸ್ತ ಧರ್ಮದ ನಂತರ ಇಸ್ಲಾಂ ಧರ್ಮವು ಜಗತ್ತಿನ 2ನೇ ಅತಿ ದೊಡ್ಡ ಧರ್ಮವೂ ಹೌದು.
ಮುಸಲ್ಮಾನರು ‘ಖುರಾನ’ ಗ್ರಂಥವನ್ನು ದೇವರ ಅಕ್ಷರಶಃ ಮಾತುಗಳು ಮತ್ತು ಯಾವುದೇ ಹಸ್ತಕ್ಷೇಪಗಳಿಗೆ ಒಳಗಾಗದೆ ಸುರಕ್ಷಿತವಾಗಿ ಸಂರಕ್ಷಿಸಲಾದ ಧರ್ಮ ಗ್ರಂಥವೆಂದು ನಂಬುತ್ತಾರೆ. ಇವರು ಮುಹಮ್ಮದ್ ಪೈಗಂಬರರನ್ನು ಇಸ್ಲಾಂ ಧರ್ಮದ ಪ್ರಮುಖ ಮತ್ತು ಅಂತಿಮ ಪ್ರವಾದಿಯೆಂದು ಪರಿಗಣಿಸುತ್ತಾರೆ. ಮುಹಮ್ಮದ್ ಪೈಗಂಬರರ ನುಡಿಮುತ್ತುಗಳನ್ನು ಮತ್ತು ಜಗತ್ತಿಗೆ ಸಾರಿದ ಸಂದೇಶಗಳನ್ನು ಸುನ್ನತ್ ಎಂದು ಕರೆಯಲಾಗುತ್ತಿದ್ದು, ಇವುಗಳನ್ನು ಹದೀಸ್ ಎಂಬ ಹೆಸರಿನಲ್ಲಿ ಜೋಪಾನವಾಗಿ ಸಂಗ್ರಹಿಸಿಡಲಾಗಿದೆ. ‘ಖುರಾನ’ ಮತ್ತು ‘ಹದೀಸ್’ಗಳು ಇಸ್ಲಾಂ ಧರ್ಮದ ಧಾರ್ಮಿಕ ಭೋದನೆಗಳನ್ನು, ಸಂಸ್ಕೃತಿ ಮತ್ತು ಇತಿಹಾಸವನ್ನು ಸಾರುವ ಪ್ರಮುಖ ಮೂಲ ಆಧಾರಗಳಾಗಿವೆ.
ಇಸ್ಲಾಮಿನ ಐದು ಸ್ತಂಭಗಳಲ್ಲಿ ನಾಲ್ಕನೆಯ ಕಡ್ಡಾಯ ಕರ್ಮಸ್ತಂಭವಾಗಿರುವ ರಂಜಾನ್ ಒಂದು ತಿಂಗಳ ಕಾಲ ಉಪವಾಸ ವ್ರತದೊಂದಿಗೆ ಇಸ್ಲಾಮಿನ ಧಾರ್ಮಿಕ, ಸಾಂಪ್ರದಾಯಿಕ ವಿಧಿ ವಿಧಾನಗಳ ಪಾಲನೆಯೊಂದಿಗೆ ಆಚರಿಸುವ ವ್ರತಾಚರಣೆಯಾಗಿದೆ. ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತಮದವರೆಗೆ ಧರ್ಮ ಪಾಲನೆಗೆ ನಿಷ್ಠುರಾಗಿ ಅಲ್ಲಾ ದೇವರ ಕೃಪೆಗೆ ಪಾತ್ರರಾಗಿ ಭಕ್ತಿಯಿಂದ ಅನ್ನ, ಆಹಾರ-ಪಾನೀಯಗಳನ್ನು ಹಾಗೂ ದುಶ್ಚಟಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ.
ಲೋಕ ಕಲ್ಯಾಣಕ್ಕಾಗಿ ಮಾನವಕುಲಕ್ಕೆ ಮಾರ್ಗದರ್ಶನವನ್ನು ನೀಡಲು ರಚಿಸಿದ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ ಅವತೀರ್ಣಗೊಂಡ ತಿಂಗಳು ರಂಜಾನ್. ಇದರ ಸ್ಮರಣಾರ್ಥಕವಾಗಿ ಪ್ರತಿವರ್ಷವೂ ಒಂದು ತಿಂಗಳ ಕಾಲ ರಂಜಾನ್ ನಾಮದೊಂದಿಗೆ ಮುಸ್ಲಿಮರು ವ್ರತಾಚರಣೆಯನ್ನು ಮಾಡುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳಿನಲ್ಲಿ ರಂಜಾನ್ ಹಬ್ಬದ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ. ಇದು ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಕ್ರಗಳನ್ನು ಆಧರಿಸಿರುವುದರಿಂದ ಪ್ರತಿ ವರ್ಷವೂ ದಿನ ಬದಲಾವಣೆಯೊಂದಿಗೆ ರಂಜಾನ್ ಆಚರಿಸಲಾಗುತ್ತದೆ.
ಮುಸ್ಲಿಂ ಬಾಂಧವರು ಚಂದ್ರನನ್ನು ರಂಜಾನ್ ಪ್ರಾರಂಭವಾಗುವ ಮೊದಲ ದಿನದಂದು ನೋಡಿಕೊಂಡು ರೋಜಾ ವ್ರತವನ್ನು ಕೈಗೊಳ್ಳುತ್ತಾರೆ. ಮೂವತ್ತು ದಿನಗಳ ಸತತವಾಗಿ ರೋಜಾ ವ್ರತವನ್ನು ಪಾಲಿಸಿಕೊಂಡು ರಂಜಾನ್ ಕೊನೆಗೊಳ್ಳುವ ಕೊನೆಯ ದಿನದಂದು ಮತ್ತೊಮ್ಮೆ ಚಂದ್ರನನ್ನು ನೋಡಿಕೊಳ್ಳುವುದರ ಮೂಲಕ ಪ್ರಮುಖವಾಗಿ ಹಿಲಾಲ್ (ಚಾಂದರಾತ್) ರಾತ್ರಿಯನ್ನು ಆಚರಿಸುತ್ತಾರೆ.
ಉಪವಾಸ ಕೇವಲ ಶಾರೀರಿಕ ಕ್ರಿಯೆಯಲ್ಲ. ಇದು ಮುಸ್ಲಿಮರನ್ನು ಅಲ್ಲಾಹು ದೇವರ ಹತ್ತಿರ ತರುವ ಉದ್ದೇಶವನ್ನು ಹೊಂದಿರುವ ಆಧ್ಯಾತ್ಮಿಕ ಕ್ರಿಯೆಯಾಗಿದೆ. ಉಪವಾಸವು ಮುಂಜಾನೆ ಪ್ರಾರಂಭವಾಗಿ ಸಾಯಂಕಾಲ ಸಮಯದಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ತಿನ್ನುವುದು ಮತ್ತು ಕುಡಿಯುವುದನ್ನು ತ್ಯಜಿಸುವುದರ ಜೊತೆಗೆ, ಮುಸ್ಲಿಮರು ಶಾರೀರಿಕ ಸಂಬಂಧಗಳಿಂದ, ದುಶ್ಚಟಗಳಿಂದ, ದುರ್ನಡತೆಗಳಿಂದ ದೂರವಿರುತ್ತಾರೆ.
ರೋಜಾ ಇರುವ ಬಾಂಧವರು ಸಾಮಾನ್ಯವಾಗಿ ಬೇಗನೆ ಎದ್ದು ತಮ್ಮ ಉಪವಾಸವನ್ನು ಪ್ರಾರಂಭಿಸುವ ಮೊದಲು ಸೂರ್ಯೋದಯದ ಪೂರ್ವದಲ್ಲಿ ಸೇವಿಸುವ ಲಘು ಆಹಾರವನ್ನು ಸುಹೂರ್ ಅಥವಾ ಸಹರಿ ಎಂದು ಕರೆಯಲಾಗುತ್ತದೆ.
ಪ್ರತಿದಿನ ಸೂರ್ಯಾಸ್ತದ ನಂತರ ಈಫ್ತಿಯಾರ್ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿಗಳಲ್ಲಿ, ಕೆಲವರು ಮನೆಗಳಲ್ಲಿ ಕುಟುಂಬದವರ ಜೊತೆಗೂಡಿ ಮೊದಲು ಖರ್ಜೂರ, ತಂಪು ಪಾನೀಯ, ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸವನ್ನು ಮುರಿಯುತ್ತಾರೆ.
ತರಾವಿಹ್ ಎಂಬುದು ಭಕ್ತರು ಮಾಡುವ ತಡರಾತ್ರಿಯ ಪ್ರಾರ್ಥನೆಯಾಗಿದೆ. ಮುಸ್ಲಿಂ ಸಹೋದರರು ರಂಜಾನ್ ತಿಂಗಳಲ್ಲಿ ಪ್ರತಿ ರಾತ್ರಿ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಝಕಾತ್ ಸಮಾಜಕ್ಕೆ ಮತ್ತು ಆರ್ಥಿಕವಾಗಿ ಹಿಂದುಳಿದ ಬಡವವರಿಗೆ ನಿರ್ಗತಿಕರಿಗೆ ಅನ್ನ, ಆಹಾರ, ವಸ್ತುಗಳನ್ನೂ, ಆಭರ್ಣಗಳನ್ನು, ಸಂಪತ್ತನ್ನು ದಾನವಾಗಿ ನೀಡುವ ಒಂದು ಮಾರ್ಗವಾಗಿದೆ.
ರಂಜಾನ್ ಆಧ್ಯಾತ್ಮಿಕ ಪ್ರತಿಫಲನ, ಸ್ವಯಂ-ಸುಧಾರಣೆ ಮತ್ತು ಮುಸ್ಲಿಮರಿಗೆ ಹೆಚ್ಚಿದ ಆರಾಧನೆಯ ಸಮಯ ಎಂದು ಉದ್ದೇಶಿಸಲಾಗಿದೆ. ಮೂವತ್ತು ದಿನಗಳ ಉಪವಾಸ ಮುಕ್ತಾಯದ ನಂತರ ಶವಾಲ್ನ ತಿಂಗಳಿನ ಮೊದಲನೆಯ ದಿವಸದಂದು ಈದ್ ಉಲ್ ಪಿತರ್ ಹಬ್ಬವನ್ನೂ ಆಚರಿಸಲಾಗುತ್ತದೆ.
ಈ ಆಚರಣೆಯು ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಆಲ್ಪೌಪಹಾರ ಸೇವಿಸದೇ ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯ ಅರಿವನ್ನು ಮೂಡಿಸುತ್ತದೆ, ಇಲ್ಲಿ ಬಡವ- ಶ್ರೀಮಂತರೆನ್ನುವ ಬೇಧವಿಲ್ಲದೆ ಎಲ್ಲರೂ ಸಮಾನರಾಗಿ ವೃತಾಚರಣೆಯಲ್ಲಿ ತೊಡಗುತ್ತಾರೆ. ಇದು ಸಮಾನತೆ ಮತ್ತು ಏಕತೆಯನ್ನು ಸಾರುತ್ತದೆ. ಈ ಹಬ್ಬವು ಸಂದರ್ಭೋಚಿತವಾಗಿ ದಾನ್ಯ, ಸಂಪತ್ತನ್ನು ಬಡ ನಿರ್ಗತಿಕರಿಗೆ ದಾನ ಮಾಡುವುದನ್ನು ತಿಳಿಸುತ್ತದೆ.
– ಪಾಂಡು ಆಲಪ್ಪ ಚವ್ಹಾಣ.
ಉಪನ್ಯಾಸಕರು, ಬೆಳಧಡಿ-ಗದಗ.