ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,ಶಿರಹಟ್ಟಿ
ಸ್ಥಳೀಯ ಪಟ್ಟಣ ಪಂಚಾಯತ್‌ಗೆ ಕಳೆದ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅಭ್ಯರ್ಥಿಗಳಿಗೆ ಅಧಿಕಾರ ಭಾಗ್ಯ ದೊರೆತಿರಲಿಲ್ಲ. ಮೀಸಲಾತಿ ವಿಳಂಬದಿಂದ ಕಂಗೆಟ್ಟು ಹೋಗಿದ್ದ ಸದಸ್ಯರಿಗೆ ಇದೀಗ ಸರಕಾರ ಮತ್ತೆ ಹೊಸದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸಿದೆ. ಮೀಸಲಾತಿಯಂತೆ ಇಬ್ಬರು ಅಭ್ಯರ್ಥಿಗಳು ಅರ್ಹರಿದ್ದು ಇವರಿಬ್ಬರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎನ್ನುವ ವಿಷಯ ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಪಕ್ಷದಲ್ಲಿ ಇಬ್ಬರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದು, ಪಕ್ಷದ ಹಿರಿಯರ ನಿರ್ಣಯದಂತೆ ಆಯ್ಕೆ ನಡೆಯಲಿದೆ. ಇದಕ್ಕೆ ಎಲ್ಲ ಸದಸ್ಯರೂ ಬದ್ಧರಿರಲಿದ್ದಾರೆ.
-ಹುಮಾಯೂನ್ ಮಾಗಡಿ,
ಶಿರಹಟ್ಟಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕಾಂಗ್ರೆಸ್‌ಗೆ ಬಹುಮತ: ಶಿರಹಟ್ಟಿ ಪಪಂ ವ್ಯಾಪ್ತಿಗೆ ಬರುವಂತಹ ೧೮ ವಾರ್ಡುಗಳ ಪೈಕಿ ೧೦ರಲ್ಲಿ ಕಾಂಗ್ರೆಸ್, ೭ರಲ್ಲಿ ಬಿಜೆಪಿ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದು, ನಂತರದ ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿಯು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದನು. ಹೀಗಾಗಿ ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಇದೇ ಪಕ್ಷದಲ್ಲಿ ನೂತನ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನವು ಹಿಂದುಳಿದ ’ಬ’ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಇದಕ್ಕೆ ಅರ್ಹತೆ ಹೊಂದಿದವರ ಪೈಕಿ ವಾರ್ಡ್ ನಂ.೫ರ ಪರಮೇಶ ಪರಬ ಹಾಗೂ ವಾರ್ಡ್ ನಂ.೧೩ರ ಗಂಗವ್ವ ಆಲೂರ ಸ್ಪರ್ಧೆಯಲ್ಲಿದ್ದಾರೆ.
ಅಂತೂ-ಇಂತೂ ಅಧಿಕಾರ ಬಂತು?: ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದಂತಹ ಅಭ್ಯರ್ಥಿಗಳು ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಪ್ರಕಟಿಸಿದ್ದರಿಂದ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಅಂತೂ-ಇಂತೂ ಅಧಿಕಾರ ಬಂತು ಎನ್ನುವ ರೀತಿಯಲ್ಲಿದೆ. ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕೆ ತುದಿಗಾಲಲ್ಲಿ ನಿಂತಿದ್ದು, ಇನ್ನೂ ಸ್ಥಳೀಯ ಬಿಜೆಪಿ ನಾಯಕರು ಕೂಡ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕದೇ ಸಹಕಾರ ನೀಡುವುದಾಗಿ ಹೇಳುತ್ತಿದ್ದಾರೆ.
ಬಿಜೆಪಿಯಲ್ಲಿ ’ಬ’ ವರ್ಗದ ಅಭ್ಯರ್ಥಿಗಳು ಯಾರೂ ಇಲ್ಲ. ಪರಮೇಶ ಪರಬ ಇವರ ಆಯ್ಕೆಗೆ ಬೆಂಬಲ ನೀಡುತ್ತೇವೆ.
-ವಿಶ್ವನಾಥ ಕಪ್ಪತ್ತನವರ್, ಬಿಜೆಪಿ ಮುಖಂಡ