HomeUncategorizedಸ್ವಾತಂತ್ರ‍್ಯ ಸಮರದ ಅಮರ ವೀರರು

ಸ್ವಾತಂತ್ರ‍್ಯ ಸಮರದ ಅಮರ ವೀರರು

For Dai;y Updates Join Our whatsapp Group

Spread the love

ಬ್ರಿಟಿಷರ ಅಟ್ಟಹಾಸ, ಭೋರ್ಗರೆವ ಗುಂಡಿನ ಮಳೆ, ಸಾವಿರಾರು ಅಮಾಯಕರ ಆಕ್ರಂದನ, ಚೆಲ್ಲಾಪಿಲ್ಲಿಯಾಗಿ ಹರಡಿರುವ ರಕ್ತ ಸಿಕ್ತ ದೇಹಗಳು, ದಿಕ್ಕು ತೋಚದೆ ಬಾವಿಯಲ್ಲಿ ಜಿಗಿದು ಪ್ರಾಣ ಬಿಡುತ್ತಿರುವ ಜನ…ಇವನ್ನೆಲ್ಲಾ ನೆನಪಿಸಿಕೊಂಡರೆ ಮನ ವಿಲ ವಿಲ ಒದ್ದಾಡುತ್ತದೆ. ಮೈ ಜುಮ್ ಎನ್ನುವುದರಲ್ಲಿ ಸಂಶಯವಿಲ್ಲ.

ಆಲಿಯನ್ ವಾಲಾಭಾಗ್ ಹತ್ಯಾಕಾಂಡ ಭಾರತದ ಇತಿಹಾಸದಲ್ಲೇ ಕಂಡರಿಯದ ಕರಾಳವಾದ ದಿನ. ಭರತ ಖಂಡದಲ್ಲಿ ಸ್ವಾತಂತ್ರಪೂರ್ವ ಬ್ರಿಟಿಷರ ದಬ್ಬಾಳಿಕೆ ಹೇಗಿತ್ತು ಎಂಬುದಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನ.

ಸಾವಿರಾರು ಅಮಾಯಕರನ್ನು ನಾಲ್ಕು ಗೋಡೆಗಳ ಮಧ್ಯೆ ಭೀಕರವಾಗಿ ಸಂಹಾರಗೈದು, ಅಟ್ಟಹಾಸದಿ ಹೇಡಿತನ ಮೆರೆದ ಬ್ರಿಟಿಷರ ಆ ದಿನವನ್ನು ಪ್ರತಿ ಭಾರತೀಯ ಹೇಗೆ ಮರೆಯಲಿಕ್ಕೆ ಸಾಧ್ಯ?

1919, ಎಪ್ರಿಲ್ 13. ಸಾಯಂಕಾಲ 4.30ರ ಸಮಯ. ಪಂಜಾಬ್ ಪ್ರಾಂತದ ಅಮೃತ್‌ಸರ್‌ನ ಪಕ್ಕದ ಜಲಿಯನ್‌ವಾಲಾ ಬಾಗ್ ಮೈದಾನದಲ್ಲಿ ಬ್ರಿಟಿಷ್ ಸರಕಾರದ ಅಮಾನವೀಯ ಕಾನೂನಿನ ವಿರುದ್ಧ ಪ್ರತಿಭಟಿಸಲು ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಜನ ಸೇರಿದ್ದರು. ಸುತ್ತಲೂ ಎತ್ತರದ ಗೋಡೆಗಳಿಂದ ಆವೃತವಾಗಿದ್ದ ಕಡಿದಾದ ಪ್ರವೇಶದ್ವಾರವನ್ನು ಹೊಂದಿದ್ದ ಈ ಮೈದಾನಕ್ಕೆ ಬೈಸಾಕಿ ಹಬ್ಬದ ಸಂತೋಷದಲ್ಲಿದ್ದ ಅಮೃತಸರ್‌ನ ಸುತ್ತಲಿನ ಊರುಗಳ ಜನ ಸೇರಿದ್ದರು.

ಪಂಜಾಬ್‌ನ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಒಡ್ವೆ ಯರ್‌ನ ಸುಪರ್ದಿಯಲ್ಲಿ, ಸೇನೆಯ ಕರ್ನಲ್ ರೆಜಿನಾಲ್ಡ್ ಡಯರ್ ಸಭೆಗೆ ಬಂದಿದ್ದ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳಲು ಮೊದಲೇ ಸಂಚು ರೂಪಿಸಿದಂತಿತ್ತು. ಗುಂಪು ಸೇರುವುದನ್ನು ತಡೆಯದ ಡಯರ್‌ನ ಸೈನ್ಯ ಜನ ಮೈದಾನದಲ್ಲಿ ಸೇರುವವರೆಗೂ ಸುಮ್ಮನಿದ್ದು, ಮೊದಲೇ ಇಕ್ಕಟ್ಟಾದ ಏಕೈಕ ದಾರಿಗೆ ಅಡ್ಡವಾಗಿ ಗನ್ನುಗಳೇ ತುಂಬಿದ್ದ ತನ್ನ ಜೀಪನ್ನು ಅಡ್ಡವಿರಿಸಿದ್ದ. ಡಯರ್ ನೇತೃತ್ವದ ಸುಮಾರು 50 ಜನ ಶಸ್ತ್ರಸಹಿತ ಸೈನಿಕರು ಜನರಿಗೆ ಕನಿಷ್ಠಪಕ್ಷ ಚದುರಲು ಎಚ್ಚರಿಕೆಯನ್ನೂ ನೀಡದೆ ನೇರವಾಗಿ ಗುಂಡಿನ ಸುರಿಮಳೆಗರೆದರು.

ನೋಡ ನೋಡುತ್ತಿದ್ದಂತೆಯೇ ಗುಂಡಿನ ದಾಳಿಗೆ ನೂರಾರು ಜನ ನೆಲಕ್ಕುರುಳಿದರು. ಗಾಯಗೊಂಡವರ ಆಕ್ರಂದನ ಮುಗಿಲು ಮುಟ್ಟಿತು. ಗುಂಡಿನ ದಾಳಿಯಿಂದ ಪಾರಾಗಲು ಓಡುವಾಗ ಕಾಲ್ತುಳಿತಕ್ಕೆ ಸಿಕ್ಕಿ ಮರಣ ಹೊಂದಿದವರು ನೂರಾರು ಜನ. ಕೆಲವರು ಎತ್ತರದ ಗೋಡೆಯನ್ನು ಹಾರಲು ಹೋಗಿ ಡಯರ್‌ನ ಸೈನಿಕರ ಗುಂಡಿಗೆ ಬಲಿಯಾದರು. ಮೈದಾನದ ಪಕ್ಕದಲ್ಲಿದ್ದ ಬಾವಿಯೊಳಗೆ ಹಾರಿ ಪ್ರಾಣ ಉಳಿಸಿಕೊಳ್ಳಬಹುದೆಂದು ಹಾರಿದವರೂ ಬದುಕುಳಿಯಲಿಲ್ಲ. 1650 ಸುತ್ತುಗಳ ಗುಂಡು ಹಾರಿಸಿದ ಬ್ರಿಟಿಷ್ ಸೈನಿಕರು ಅಕ್ಷರಶಃ ರಾಕ್ಷಸರಾಗಿ ವರ್ತಿಸಿದ್ದರು.

ಕ್ರೌರ್ಯ ಮೆರೆದ ಡಯರ್ ಆಗಲಿ, ಪಂಜಾಬ್‌ನ ಗವರ್ನರ್ ಆಗಲಿ ಈ ಘಟನೆಯ ಬಗ್ಗೆ ಪಶ್ಚಾತ್ತಾಪದ ಸಣ್ಣ ಸೆಲೆಯನ್ನೂ ತೋರಲಿಲ್ಲ! ಹತ್ಯಾಕಾಂಡದ ಸುದ್ದಿಯು ಪಂಜಾಬ್‌ನಿಂದ ಹೊರಹೋಗದಂತೆ ಎಲ್ಲಾ ಪ್ರಯತ್ನಪಟ್ಟ ಸರಕಾರ ಒತ್ತಾಯಕ್ಕೆ ಮಣಿದು ಘಟನೆ ನಡೆದ ಮೂರು ತಿಂಗಳ ಬಳಿಕ ಒಂದು ತನಿಖಾ ತಂಡವನ್ನು ನೇಮಿಸಿತು. ಇದೊಂದು ಕಾಟಾಚಾರದ ಸಮಿತಿಯಾಗಿತ್ತು.

ಅಂತಿಮವಾಗಿ ಸಮಿತಿ ಈ ಹತ್ಯಾಕಾಂಡದಲ್ಲಿ ಮರಣ ಹೊಂದಿದವರ ಸಂಖ್ಯೆ 379 ಎಂದು ನಿರ್ಧರಿಸಿತು. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ನಡೆಸಿದ ಅಂದಾಜಿನ ಪ್ರಕಾರ 1500 ಕ್ಕೂ ಮೀರಿತ್ತು. ವಾಸ್ತವದಲ್ಲಿ ಈ ಸಂಖ್ಯೆ 2000ಕ್ಕಿಂತಲೂ ಅಧಿಕ ಎಂದು ಇತಿಹಾಸಕಾರರ ಅಭಿಪ್ರಾಯ.

ಈ ಘಟನೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟದ ದಿಕ್ಕನ್ನೇ ಬದಲಾಯಿಸಿತು. ಒಂದು ಶತಮಾನದ ಹಿಂದೆ ನಡೆದ ಈ ಘಟನೆಯನ್ನು ಇಂದು ನಿಂತು ನೋಡಿದರೆ ವಸಾಹತುಶಾಹಿಯು ತನ್ನ ಸಾಮ್ರಾಜ್ಯವನ್ನು ಉಳಿಸಲು ನಡೆಸಿದ ಕ್ರೌರ್ಯ, ಹಿಂಸೆ, ರಕ್ತಪಾತಗಳು ಕಣ್ಮುಂದೆ ಕಟ್ಟಿದಂತಾಗುತ್ತದೆ.

ಹತ್ಯಾಕಾಂಡದ ಪ್ರತ್ಯಕ್ಷದರ್ಶಿ 20ರ ಹರೆಯದ ಯುವಕ ಉಧಮ್ ಸಿಂಗ್ ತನ್ನ ತಾಯ್ನಾಡಿನ ಬಂಧುಗಳ ಹತ್ಯೆಗೆ ಕಾರಣರಾದವರನ್ನು ಬಲಿ ಪಡೆಯುವ ಶಪಥ ಮಾಡುತ್ತಾನೆ. ಈ ಘಟನೆ ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ಹೊಸ ಸ್ಫೂರ್ತಿಯನ್ನು ಕೊಟ್ಟಿತು. ಅಂದು ಬ್ರಿಟಿಷ್ ಸೈನ್ಯಾಧಿಕಾರಿ ಅಮಾಯಕ ಭಾರತೀಯರ ಮೇಲೆ ಹಾರಿಸಿದ ಒಂದೊಂದು ಗುಂಡೂ ಕೂಡ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನು ಕೆಡವಿಹಾಕುವ ಗುಂಡುಗಳಾಗಿ ಪರಿವರ್ತನೆಯಾಯಿತು.

ಸೂತಕದ ಮಧ್ಯೆ ಹಠ ಮಾಡಿ ಅಲ್ಲಿಗೆ ತನ್ನ ತಂದೆಯೊಂದಿಗೆ ಧಾವಿಸಿದ ಒಬ್ಬ ಪುಟಾಣಿ ಪೋರ ಛಿದ್ರ-ಛಿದ್ರಗೊಂಡ ದೇಹಗಳನ್ನು ದುರುಗುಟ್ಟಾಗಿ ನಿಂತ. ಸ್ವತಃ ಕುಟುಂಬವೆಂದು ನಂಬಿದ್ದ ಭಾರತೀಯರನ್ನು ಆತ ಕಳೆದುಕೊಂಡ. ಮನಸ್ಸಿನ ಭಾವವನ್ನು ತಡೆ ಹಿಡಿದ ಆತ ಒಂದು ಹನಿ ಕಣ್ಣೀರು ಇಡಲಿಲ್ಲ, ಬದಲಾಗಿ ಆ ರಕ್ತದಲ್ಲಿ ಒಂದಾದ ಮಣ್ಣನ್ನು ಕೈಯಲ್ಲಿ ಹಿಡಿದು ಈ ಭಾರತದಿಂದ ಬ್ರಿಟಿಷರನ್ನು ಓಡಿಸುವ ಪಣತೊಟ್ಟ. ಈ ಛಲವಾದಿ ಬೇರಾರು ಅಲ್ಲ, ಮುಂದೊಂದು ದಿನ ಬ್ರಿಟಿಷರಿಗೆ ಸಿಂಹ ಸ್ವಪ್ನವಾದ ಕ್ರಾಂತಿಯ ಕಿಡಿ ಕೆಚ್ಚೆದೆಯ ‘ಭಗತ್ ಸಿಂಗ್’.

ಈ ಹತ್ಯಾಕಾಂಡಕ್ಕೆ ಇಂದಿಗೆ 105 ವರ್ಷಗಳೇ ಸಂದಿವೆ. ಅಂದು ಬ್ರಿಟಿಷರ ದಬ್ಬಾಳಿಕೆಗೆ ಹುತಾತ್ಮರಾದ ಎಲ್ಲಾ ಭಾರತೀಯರನ್ನು ನೆನೆಸುತ್ತಾ, ನಾವು ಈ ಪೀಳಿಗೆಯಲ್ಲಿ ದೇಶಭಕ್ತಿಯನ್ನು ನರನಾಡಿಗಳಲ್ಲಿ ಹುರಿಗೊಳಿಸುವ ಪ್ರಯತ್ನ ಮಾಡಬೇಕಿದೆ.

ಈಶ್ವರ ಎಸ್.ಮೆಡ್ಲೇರಿ. ಲಕ್ಷ್ಮೇಶ್ವರ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!