ಸಿರಿಧಾನ್ಯ ಭಾರತೀಯರ ಸಾಂಪ್ರದಾಯಿಕ ಆಹಾರ

0
siridhanya
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತಕ್ಕೆ ಬ್ರಿಟಿಷರ ಆಗಮನದ ನಂತರ ನಾವು ಮೈದಾ, ಗೋಧಿಯಂಥ ಪಾಶ್ಚಾತ್ಯ ಆಹಾರದ ಕಡೆಗೆ ವಾಲಿದೆವು. ಆದರೆ ಅವರ ಆಗಮನಕ್ಕೂ ಮೊದಲು ಸಿರಿಧಾನ್ಯಗಳೇ ಭಾರತೀಯರ ಆಹಾರವಾಗಿದ್ದವು ಎಂದು ಕೆಎಲ್‌ಇ ಮಹಾವಿದ್ಯಾಲಯದ ಉಪನ್ಯಾಸಕಿ ವೀಣಾ ತಿರ್ಲಾಪೂರ ನುಡಿದರು.

Advertisement

ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ಜರುಗಿದ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿದರು.

ಪಾಶ್ಚಾತ್ಯ ಖಾದ್ಯಗಳಿಂದ ಪ್ರಭಾವಿತರಾಗಿ ನಮ್ಮ ಮೂಲ ಆಹಾರವಾದ ಸಿರಿಧಾನ್ಯಗಳನ್ನು ನಾವು ಕಡೆಗಣಿಸಿದ ಫಲವಾಗಿ ಆಧುನಿಕ ದಿನಗಳಲ್ಲಿ ರೋಗಗಳು ಹೆಚ್ಚಾಗುತ್ತಿದೆ. ರೋಗಮುಕ್ತವಾದ-ಆರೋಗ್ಯಕರ ಜೀವನಕ್ಕೆ ಸಿರಿಧಾನ್ಯಗಳ ಬಳಕೆ ಅವಶ್ಯಕ. ಶ್ರೀಮಠದ ಜಾತ್ರೆಯು ತನ್ನ ಸಾಮಾಜಿಕ ಕಾಳಜಿಗೆ ಹೆಸರುವಾಸಿಯಾಗಿದ್ದು, ಈ ಬಾರಿ ಸಿರಿಧಾನ್ಯಗಳ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಅಡುಗೆ ತಯಾರಿಕೆಯ ಸ್ಪರ್ಧೆ ಆಯೋಜಿಸಿದ್ದು ಶ್ಲಾಘನೀಯವಾಗಿದೆ ಎಂದರು.

ಇನ್ನೋರ್ವ ನಿರ್ಣಾಯಕರಾದ ಅನುಸೂಯಾ ದೇವಾಂಗಮಠ ಮಾತನಾಡಿ, ಅಡುಗೆ ಹೆಣ್ಣಿಗೆ ದೈವದತ್ತವಾಗಿ ಒಲಿದುಬಂದಿದ್ದು, ಇತ್ತೀಚಿನ ದಿನಗಳಲ್ಲಿ ಮಹಿಳೆ ಅಡುಗೆಕೋಣೆಯನ್ನೂ ಮೀರಿ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ವಿಶೇಷ. ಇಂಥ ಅರ್ಥಪೂರ್ಣ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ವಿನಃ ಗೆಲ್ಲುವುದಷ್ಟೇ ಅಲ್ಲ ಎಂದರು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್. ಬೇಲೂರ, ಉಪಾಧ್ಯಕ್ಷರಾದ ಶ್ರೀದೇವಿ ಶೆಟ್ಟರ್, ಕಾರ್ಯದರ್ಶಿ ಪ್ರವೀಣ ವಾರಕರ, ಶ್ರೀಮಠದ ಮ್ಯಾನೇಜರ್ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಗವಿಸಿದ್ಧಪ್ಪ ಗಾಣಿಗೇರ, ಶಿವಲೀಲಾ ಅಕ್ಕಿ, ಸುರೇಖಾ ಪಿಳ್ಳೆ, ಅಕ್ಕಮಹಾದೇವಿ ಚಟ್ಟಿ, ರತ್ನಕ್ಕ ಪಾಟೀಲ, ಪ್ರಭು ಗಂಜಿಹಾಳ ಮುಂತಾದವರು ಉಪಸ್ಥಿತರಿದ್ದರು.

ಸಿರಿಧಾನ್ಯಗಳ ಸಿಹಿ ಅಡುಗೆ ತಯಾರಿಕೆಯಲ್ಲಿ ಸುಧಾ ಕೆರೂರ ಪ್ರಥಮ, ವಿದ್ಯಾ ಗಂಜಿಹಾಳ ದ್ವಿತೀಯ, ಲತಾ ಮಾನೆ ತೃತೀಯ ಸ್ಥಾನ ಪಡೆದರೆ, ಸಿರಿಧಾನ್ಯಗಳ ಖಾರದ ಅಡುಗೆಯಲ್ಲಿ ಸುಮಲತಾ ಕೋರಿಶೆಟ್ಟರ ಪ್ರಥಮ, ವಿದ್ಯಾ ಗಂಜಿಹಾಳ ದ್ವಿತೀಯ, ರತ್ನಕ್ಕ ತೆಲ್ಲೂರ ತೃತೀಯ ಸ್ಥಾನ ಪಡೆದರು.


Spread the love

LEAVE A REPLY

Please enter your comment!
Please enter your name here