ವಿಜಯಸಾಕ್ಷಿ ಸುದ್ದಿ, ಗದಗ : ಕಾನೂನು ಸಚಿವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಮತದಾರರಿಗೆ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಿ, ಅವರಿಂದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಪಡೆಯುವ ಮೂಲಕ ವೈಯಕ್ತಿಕ ಮಾಹಿತಿ ಸಂಗ್ರಹಣೆ ಮತ್ತು ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪಿಸಿದರು.
ಶುಕ್ರವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಗೆಲುವು ನಿಶ್ಚಿತ ಎನ್ನುವ ವಾತಾವರಣವಿದೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಕೊಟ್ಟು ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಕಾರ್ಡ್ ನೀಡುವುದು ಮತದಾರರಿಗೆ ಆಮಿಷ ನೀಡಿದಂತೆ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದರೂ, ಕಾಂಗ್ರೆಸ್ ಕಾರ್ಯಕರ್ತರು ಕಾರ್ಡ್ ಹಂಚಿಕೆಯಲ್ಲಿ ತೊಡಗಿದ್ದಾರೆ. ಇಂಥವರ ವಿರುದ್ಧ ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅನಿಲ ಮೆಣಸಿನಕಾಯಿ ಒತ್ತಾಯಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯನ್ನು ಗಮನಿಸಿದರೆ ಅಭಿವೃದ್ಧಿಗೆ ಯಾವುದೇ ಆದ್ಯತೆ ನೀಡದಿರುವುದು ಸ್ಪಷ್ಟವಾಗಿದೆ. ಬಿಜೆಪಿ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು, ತಮ್ಮ ಪ್ರಣಾಳಿಕೆಯನ್ನು ಉದ್ಯೋಗ ಸೃಷ್ಟಿಗೆ ಯಾಕೆ ಆದ್ಯತೆ ಕೊಟ್ಟಿಲ್ಲ? ಯುವಕರಿಗೆ 1 ಲಕ್ಷ ರೂಪಾಯಿ ಕೊಡುವ ಭರವಸೆ ನೀಡಿದ್ದಾರೆಯೇ ಹೊರತು ಉದ್ಯೋಗ ಕೊಡುವ ಭರವಸೆ ನೀಡಿಲ್ಲ. ದೇಶದ ಬಜೆಟ್ 45 ಲಕ್ಷ ಕೋಟಿ ರೂಪಾಯಿ ಇದ್ದರೂ 100 ಲಕ್ಷ ಕೋಟಿ ರೂಪಾಯಿಗಳ ಗ್ಯಾರಂಟಿ ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ಆ ಹಣ ಎಲ್ಲಿಂದ ತರುತ್ತಾರೆ? ಇದೇ ರೀತಿ ಉಚಿತ ಯೋಜನೆಗಳನ್ನು ಕೊಡುತ್ತಾ ಹೋದರೆ ದೇಶ ದಿವಾಳಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ಸಂಗಮೇಶ ದುಂದೂರ, ಮಂಜಣ್ಣ ಮುತ್ತಿನಪೆಂಡಿಮಠ, ಮುತ್ತಣ್ಣ ಗದಗಿನ, ವಸಂತ ಪಡಗದ, ಪರಮೇಶ ನಾಯಕ, ರವಿಕಾಂತ ಅಂಗಡಿ, ಆನಂದ ಸೇಠ, ಪ್ರಫುಲ್ ಪುಣೇಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಮೊದಲು ರಾಜ್ಯದ ರೈತರ ಸಾಲ ಮನ್ನಾ ಮಾಡಿ ಜನರ ವಿಶ್ವಾಸ ಗಳಿಸಿ ಮತ ಕೇಳಲಿ ಎಂದು ಸವಾಲು ಹಾಕಿದರು.