ವಿಜಯಸಾಕ್ಷಿ ಸುದ್ದಿ, ಗದಗ : ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ನಮ್ಮ ದೇಶದ ಹಲವೆಡೆ ಮೇ.7ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಆ ಪ್ರಯುಕ್ತ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ನಮ್ಮ ನಗರದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಇದು ಐದು ವರ್ಷಕ್ಕೊಮ್ಮೆ ಬರುವ ಪ್ರಜಾಪ್ರಭುತ್ವದ ಹಬ್ಬ. ಅಂದು ಎಲ್ಲಿಯೇ ಇದ್ದರೂ ಬಂದು ನಿಮ್ಮ ಮತ ಇರುವ ಸ್ಥಳದಲ್ಲಿ ಮತ ಚಲಾಯಿಸಿ ಎಂದು ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಕರೆ ನೀಡಿದರು.
ಅವರು ಜಿಲ್ಲಾ ಸ್ವೀಪ್ ಸಮಿತಿಯ ಸೂಚನೆಯಂತೆ ಬೆಟಗೇರಿಯ ಕಡಿಮೆ ಮತದಾನವಾದ ಮತಗಟ್ಟೆ ವ್ಯಾಪ್ತಿಯ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದರು.
ನಿಮ್ಮ ಮತಗಟ್ಟೆಗೆ ಮತದಾರರ ಚೀಟಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ಚೀಟಿಯೊಂದಿಗೆ ಬಂದು ಮತದಾನ ಮಾಡಿ. ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಪಡಿಸಿ, ನಿಮ್ಮ ಜವಾಬ್ದಾರಿ ನಿಭಾಯಿಸುವಂತೆ ಗದಗ ಜಿಲ್ಲೆಯ ಹಾಗೂ ತಾಲೂಕು ಸ್ವೀಪ್ ಸಮಿತಿಯ ಪರವಾಗಿ ವಿನಂತಿಸಿದರು.
ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಬಾಸೆಲ್ ಮಿಶನ್ ಪ್ರೌಢಶಾಲೆ ಬೆಟಗೇರಿ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.1, ಬೆಟಗೇರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕಿಯರಾದ ಜೆಸ್ಸಿಕಾ ಡಿ.ಕ್ರೂಜ್, ಶ್ರೀಮತಿ ಜವಳಿ, ದೀಪಾ ಬೇವಿನಮರದ, ಸ್ವೀಪ್ ನೋಡಲ್ ಅಧಿಕಾರಿ ಪ್ರಕಾಶ ಮಂಗಳೂರು, ಶ್ಯಾಂ ಲಾಂಡೆ, ಇಸಿಓ ಮಡಿವಾಳರ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಜರಿದ್ದರು.
ಗದಗ ಶಹರವಲಯದ ಬಾಸೆಲ್ ಮಿಷನ್ ಕೃಷಿ ಪ್ರೌಢಶಾಲೆ ಬೆಟಗೇರಿಯ ಮತಗಟ್ಟೆ ಸಂಖ್ಯೆ 17, 18, 19ರ ಮತಗಟ್ಟೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮುಖ್ಯೋಪಾದ್ಯಾಯರು, ಶಿಕ್ಷಕರು, ಮಕ್ಕಳು, ಎಲ್ಲ ಸಿಆರ್‌ಪಿ, ಬಿಆರ್‌ಪಿಗಳು, ವಿವಿಧ ಶಾಲಾ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ಜಾಥಾವನ್ನು ನಡೆಸಿದರು. ಶಾಲೆಯ ಮಕ್ಕಳು ಚುನಾವಣಾ ಆಯೋಗದ ಹಾಡಿಗೆ ಹೆಜ್ಜೆ ಹಾಕಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.