ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯು ಬದುಕು, ಭಾವನೆಗಳ ಮಧ್ಯೆ ಇರುವ ಚುನಾವಣೆ, ಸಂವಿಧಾನವನ್ನು ರಕ್ಷಣೆ ಮಾಡುವ ಚುನಾವಣೆ, ಎಲ್ಲರೂ ಕೂಡಿ ಇರುವ ಭ್ರಾತೃತ್ವ ಭಾವನೆ ಮೂಡಿಸುವ ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ 10ನೇ ವಾರ್ಡಿನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜನರ ಸ್ವಾಭಿಮಾನಕ್ಕೆ ಕೊರತೆ ಬರಬಾರದು ಎಂಬ ಸದಾಶಯದಿಂದ ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ್ದ ಪಂಚ ಗ್ಯಾರಂಟಿ ಭರವಸೆಗಳನ್ನು ಇಂದು ಸಂಪೂರ್ಣವಾಗಿ ಅನುಷ್ಠಾನ ಮಾಡಿದ್ದು, ವರ್ಷಕ್ಕೆ 58 ಸಾವಿರ ಕೋಟಿ ರೂ ಹಣ ಖರ್ಚು ಮಾಡಲಾಗುತ್ತಿದೆ. ಬಡತನ ರೇಖೆಗಿಂತ ಕಡಿಮೆ ಇದ್ದ 1.10 ಕೋಟಿ ಕುಟುಂಬಗಳನ್ನು ಆರ್ಥಿಕವಾಗಿ ಮೇಲೇತ್ತಲಾಗಿದೆ ಎಂದು ಹೇಳಿದರು.
2.5 ಕೋಟಿ ಮಹಿಳೆಯರು ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಧರ್ಮಸ್ಥಳ ಸೇರಿ ರಾಜ್ಯದ ಇತರೆ ಧಾರ್ಮಿಕ ಕ್ಷೇತ್ರಗಳಿಗೆ ಭೇಡಿ ನೀಡಿದ ಮಹಿಳೆಯರು ಈ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕಾಂಗ್ರೆಸ್ ಸರಕಾರಕ್ಕೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತಿರುವುದು ನಮ್ಮ ಗೆಲುವಿಗೆ ಭರವಸೆ ಮೂಡಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಈಗಾಗಲೇ ಪ್ರತಿ ಮಹಿಳೆಗೆ ಪ್ರತಿವರ್ಷ 1 ಲಕ್ಷ ರೂ. ಅನುದಾನ ನೀಡುವ ಗ್ಯಾರಂಟಿ ಘೋಷಿಸಿದೆ.
ಜೊತೆಗೆ ರೈತರ ಸಾಲಮನ್ನಾ ಮಾಡುವ ಗ್ಯಾರಂಟಿ ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಲಿನ ಹತಾಶೆಯಿಂದ ಮಾಂಗಲ್ಯ ಸೂತ್ರವನ್ನು ಬಿಚ್ಚಿ ಅಲ್ಪಸಂಖ್ಯಾತರಿಗೆ ನೀಡುತ್ತಾರೆ ಎಂಬ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ 10ನೇ ವಾರ್ಡಿನ ಜನತೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಮುನ್ನುಡಿಯಾಗಬೇಕು ಎಂದು ಹೇಳಿದರು.
10ನೇ ವಾರ್ಡಿನ ಸದಸ್ಯ ಇಮ್ತಿಯಾಜ್ ಶಿರಹಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, 10ನೇ ವಾರ್ಡಿನಲ್ಲಿ 800ಕ್ಕೂ ಹೆಚ್ಚು ಮನೆಗಳಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ತಿಂಗಳಿಗೆ 15 ಲಕ್ಷ ರೂ. ಅನುದಾನ ಬರುತ್ತಿದೆ ಎಂದರು.
ಮುಖಂಡ ಅಜ್ಜನಗೌಡ ಹಿರೇಮನಿಪಾಟೀಲ ಮಾತನಾಡಿದರು. ಪ್ರಮುಖರಾದ ಅಸ್ಲಂ ಬಳ್ಳಾರಿ, ಜಿ.ಆರ್. ಕರಡಿ, ಮಲ್ಲಿಕಾರ್ಜುನ ಗದಗಿನ, ಬಸಪ್ಪ ಚಿಕ್ಕಣ್ಣವರ, ಜಹಾಂಗೀರ್ ಅಣ್ಣಿಗೇರಿ, ಇಬ್ರಾಹಿಂ ಶಿರಹಟ್ಟಿ, ಈಶ್ವರ ಗದಗಿನ, ಮಹಮ್ಮದ್ ಸಾಬ್ ಈಟಿ, ಜಾನಿಸಾಬ್ ಹಣಗಿ, ಇಮ್ತಿಯಾಜ್ ಮುಳಗುಂದ, ದ್ರಾಕ್ಷಾಯಿಣಿ ಕರಬಿಷ್ಠಿ, ಮಮ್ತಾಜ್ ಮಕಾಂದಾರ್, ಯಶೋಧ ಜಾಲಗಾರ, ಜಾಹೀರ್ ಟೋಪಿವಾಲೆ, ಗಿರಿಜವ್ವ ಬಾರಕೇರ, ಸುಷ್ಮಾ ಬಾರಕೇರ, ರೂಪಾ ಬಾರಕೇರ, ಸಾವಿತ್ರಿ ಬಾರಕೇರ, ಲಕ್ಷ್ಮಿ ರಾಂಪೂರ ಸೇರಿ ಅನೇಕರು ಇದ್ದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲ ಅವರ ಕಾಲದಿಂದ ಇಂದಿನವರೆಗೂ ಈ ವಾಡ್‌ನ ಜನತೆ ಪಕ್ಷದ ಮೇಲೆ ಅದೇ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಅಧಿಕ ಮತಗಳನ್ನು ನೀಡಿ ಆಶೀರ್ವದಿಸಬೇಕು ಎಂದು ಹೇಳಿದರು.