ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮತದಾನ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಪವಿತ್ರವಾದ ಮತದಾನದಿಂದ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಾವು ವಾಸಿಸುವ ಪ್ರದೇಶ, ಗ್ರಾಮ, ವೃತ್ತಿ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ಮಾಡುವಂತೆ ಪ್ರೇರೇಪಿಸಬೇಕು ಎಂದು ತಾಪಂ ಇಓ ಕೃಷ್ಣಪ್ಪ ಧರ್ಮರ ಹೇಳಿದರು.
ಅವರು ಭಾನುವಾರ ಪಟ್ಟಣದ ಪುರಸಭೆ ಎದುರು ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡು ನಡೆಸಿದ `ನಮ್ಮ ನಡೆ ಮತಗಟ್ಟೆಯ ಕಡೆ’ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗಬೇಕು. ಯಾವ ಮತಗಟ್ಟೆಗಳಲ್ಲಿ ಮತದಾನ ಕಡಿಮೆಯಾಗಿದೆ ಎಂಬುದನ್ನು ಪರಿಶೀಲಿಸಿ ಅಲ್ಲಿ ಮತದಾನ ಪ್ರಮಾಣ ಹೆಚ್ಚುವಂತೆ ಸ್ವತಃ ಅಧಿಕಾರಿಗಳೇ ಮನೆ ಮನೆಗೆ ಭೇಟಿ ನೀಡಬೇಕು. ಮತದಾರರಲ್ಲಿನ ನಿರಾಸಕ್ತಿ, ತಿಳುವಳಿಕೆ ಕೊರತೆ ಮತ್ತೇನಾದರೂ ಸಮಸ್ಯೆ ಇದ್ದರೆ ಪರಿಹರಿಸಿ ಪ್ರೇರೇಪಿಸುವ ಕಾರ್ಯ ಮಾಡಬೇಕು ಎಂದರು.
ಪ್ರತಿಯೊಬ್ಬ ಮತದಾರರೂ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಆಸೆ-ಆಮಿಷ, ಪ್ರೇರಣೆಗಳಿಗೆ ಒಳಗಾಗದೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿ ಬರೆಯಲು ಕಡ್ಡಾಯ ಮತದಾನ ಮಾಡಬೇಕು ಎಂದು ಹೇಳಿದರು.
ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಅಂಗನವಾಡಿ ಮೇಲ್ವಿಚಾರಕಿಯರಾದ ನಂದಾ ನವಲೆ, ಗೀತಾ ಮುಳಗುಂದ, ಪುರಸಭೆ ಕಿರಿಯ ಅರೋಗ್ಯ ನಿರೀಕ್ಷಕ, ಮಂಜುನಾಥ ಮುದಗಲ್, ಶಿವಣ್ಣ ಮ್ಯಾಗೇರಿ, ಹನುಮಂತಪ್ಪ ನಂದೆಣ್ಣನವರ, ನೇತ್ರಾ ಹೊಸಮನಿ, ಉಮಾ ಬೆಳವಿಗಿ, ಬಸವಣೆಪ್ಪ ನಂದೆಣ್ಣನವರ, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು, ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು ಇದ್ದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಎಲ್ಲರೂ ಒಟ್ಟಾಗಿ ಇತರರನ್ನೂ ಪ್ರೇರೇಪಿಸಿ ತಪ್ಪದೇ ಮತ ಚಲಾಯಿಸುವ ಮೂಲಕ ಈ ಬಾರಿ ಹೆಚ್ಚು ಮತದಾನವಾಗಬೇಕು. ಮತದಾನ ಪ್ರಮಾಣ ಹೆಚ್ಚಿಸುವ ಚುನಾವಣಾ ಆಯೋಗದ ಉದ್ದೇಶ ಸಾಫಲ್ಯಗೊಳ್ಳುವಲ್ಲಿ ಅಧಿಕಾರಿ ವರ್ಗ ಸೇರಿದಂತೆ ಪ್ರತಿಯೊಬ್ಬ ನಾಗರಿಕರೂ ಜಬಾಬ್ದಾರಿ ಮೆರೆಯಬೇಕು ಎಂದು ಹೇಳಿದರು.