ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಯಾವುದೇ ಭಯ ಬೇಡ. ನಿಮ್ಮ ಜೊತೆ ನಾವಿದ್ದೇವೆ. ಮುಕ್ತವಾಗಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ನಿರ್ಭೀತಿಯಿಂದ ಮತ ಚಲಾಯಿಸಿ ಎನ್ನುವ ಮುಂಜಾಗ್ರತಾ ಕ್ರಮವಾಗಿ ನರೇಗಲ್ಲ ಪಟ್ಟಣದಲ್ಲಿ ನೂರಕ್ಕೂ ಹೆಚ್ಚು ಕೇರಳ ರಿಸರ್ವ್ ಪೊಲೀಸ್ ಸಿಬ್ಬಂದಿಗಳು ಹಾಗೂ ಗದಗ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್.ಬಿ. ಸಂಕದ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದ ಕೊಂತಿ ಮಲ್ಲಪ್ಪನ ದೇವಸ್ಥಾನದಿಂದ ಪ್ರಾರಂಭವಾದ ಪಥಸಂಚಲಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಸಂಕದ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಮುಂಬರುವ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಮುಕ್ತವಾಗಿ ನಿರ್ಭೀತಿಯಿಂದ ಚಲಾಯಿಸಲು ಮುಂದಾಗಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತದಾರರ ಬೆನ್ನೆಲುಬಾಗಿ ನಾವಿದ್ದೇವೆ ಎಂದರು.
ರೋಣ ಸಿಪಿಐ ಎಸ್.ಎಸ್. ಬೀಳಗಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತದಾನದಿಂದ ವಂಚಿತರಾಗದಿರಿ. ಪ್ರಜಾಪ್ರಭುತ್ವದ ಹಕ್ಕನ್ನು ತಪ್ಪದೇ ಚಲಾಯಿಸಿ. ಅದು ನಿಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಕೇರಳ ರಿಸರ್ವ್ ಪೊಲೀಸ್ ಪಡೆಯೊಂದಿಗೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿಗಳು ಪಥಸಂಚಲನ ನಡೆಸಿ ಮತದಾರರಿಗೆ ಆತ್ಮ ಸ್ಥೈರ್ಯ ತುಂಬಿದರು. ನರೇಗಲ್ಲ ಪಿಎಸ್‌ಐ ಎಸ್.ಎನ್. ಬನ್ನಿಕೊಪ್ಪ, ಎಎಸ್‌ಐ ಕೆ.ಎನ್. ಬೇಲೇರಿ, ಸಿಬ್ಬಂದಿಗಳು ಸೇರಿ ನೂರಾರು ಕೇರಳ ರಿಸರ್ವ್ ಪೊಲೀಸ್ ಪಡೆ ಗಣೇಶನ ಗುಡಿ ಸಂತೆ ಬಜಾರ್ ಹಳೆ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹೊಸ ಬಸ್ ನಿಲ್ದಾಣದ ಮುಖಾಂತರ ಪೊಲೀಸ್ ಠಾಣೆವರೆಗೂ ಪಥಸಂಚಲನ ನಡೆಸಿದರು.