ಕಾಯಕದಿಂದ ಕಾರ್ಮಿಕರ ಬದುಕು ಸುಂದರಗೊಳ್ಳಲಿ

0
karmika
Spread the love

ವಿಜಯಸಾಕ್ಷಿ ಸುದ್ದಿ, ಗದಗ : ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಕಾರ್ಮಿಕ ಬಾಂಧವರು ಕಾಯಕಕ್ಕೆ ಹೆಚ್ಚಿನ ಒತ್ತು ಕೊಟ್ಟವರು. ಕಾಯಕದಿಂದ ಕಾರ್ಮಿಕರ ಬದುಕು ಸುಂದರವಾಗಿ ರೂಪುಗೊಳ್ಳಲಿ ಎಂದು ಹರ್ಲಾಪೂರದ ಹಠಯೋಗಿ ಕೊಟ್ಟುರೇಶ್ವರ ಮಠದ ಪೂಜ್ಯ ಡಾ.ಅಭಿನವ ಕೊಟ್ಟೂರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಬುಧವಾರ ಗದುಗಿನ ಡಿ.ಸಿ. ಮಿಲ್ ಕಂಪೌಂಡ್ ಆವರಣದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ದುಡಿಮೆಯನ್ನೇ ನಂಬಿ ಬದುಕುತ್ತಿರುವ ಕಾರ್ಮಿಕರು ಪರಿಶ್ರಮಿಗಳಾಗಿದ್ದು, ದುಡಿಮೆಯೊಂದೇ ಅವರಿಗಿರುವ ಗುರಿಯಾಗಿದೆ. ಇದರೊಂದಿಗೆ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ರೂಢೀಸಬೇಕೆಂದರು.
ಗದಗ ಉಪವಿಭಾಗದ ಕಾರ್ಮಿಕ ಅಧಿಕಾರಿ ಭೀಮರಾವ್ ಜಾಧವ ಮಾತನಾಡಿ, ಸರಕಾರವು ಕಾರ್ಮಿಕರ ಏಳ್ಗೆಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಜೀವನವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಹಿರೇಮನಿಪಾಟೀಲ, ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ, ವಕೀಲರಾದ ಗುರುರಾಜ ಗೌರಿ, ಗದಗ ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ ಅಸೋಶಿಯೇಶನ್‌ನ ಅಧ್ಯಕ್ಷ ಎಂ.ಪಿ. ಪಾಟೀಲ, ಸರ್ ಎಂ.ವಿಶ್ವೇಶ್ವರಯ್ಯ ಸಿವ್ಹಿಲ್ ಕನ್ಸಲ್ಟಂಟ್ ಆ್ಯಂಡ್ ಇಂಜಿನಿಯರ್ಸ್ ಫೋರಂ ಅಧ್ಯಕ್ಷ ಬೂದೇಶ ಬ್ಯಾಹಟ್ಟಿ ಮಾತನಾಡಿದರು.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕರಿಂದ ಗದಗ ಐಎಂಎ ರಕ್ತಭಂಡಾರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಕಾರ್ಮಿಕರು ರಕ್ತದಾನ ಮಾಡಿದರು. ದಾನಿಗಳಿಗೆ ಸಮಾರಂಭದಲ್ಲಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯ ಗಿರೀಶ್ ಬಂಕದಮನಿ, ಸಂದೇಶ ಪಾಟೀಲ, ಕಾನೂನು ಇಲಾಖೆಯ ಬಸವರಾಜ ಕುಕನೂರ, ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಉಪಾಧ್ಯಕ್ಷ ಜಂದಿಸಾಬ ಢಾಲಾಯತ್, ಕಾರ್ಯದರ್ಶಿ ಶಿವಶಂಕರಗೌಡ ಕರಿಸೋಮನಗೌಡ್ರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿದ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಚನ್ನವೀರಗೌಡ ಪಾಟೀಲ, ಚಾಂದಸಾಬ ಅಬ್ಬಿಗೇರಿ, ಕಲ್ಲೇಶಪ್ಪ ಕುಡಗುಂಟಿ, ಜಾಕೀರ್‌ಹುಸೇನ ಕಲಬುರ್ಗಿ, ಅಲ್ತಾಫ ಕೊಪ್ಪಳ, ಅಡಿವೆಪ್ಪ ಚಲವಾದಿ, ಚಾಂದಸಾಬ ಸೊಲ್ಲಾಪೂರ, ನೂರಅಹ್ಮದ್ ಬಳ್ಳಾರಿ, ಮಹ್ಮದ್‌ಇಬ್ರಾಹಿಮ್ ಹಳ್ಳಿಕೇರಿ, ಝಾಕೀರ್‌ಹುಸೇನ ಕರಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ನಮೃತಾ ಹಾಗೂ ಆಕಾಂಕ್ಷಾ ಪ್ರಾರ್ಥಿಸಿದರು. ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು. ಕೆ.ಬಿ. ಕುಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರೀಫ ಯಾದಗಿರಿ ಹಾಗೂ ನಾಸೀರ್ ಚಿಕ್ಕೇನಕೊಪ್ಪ ನಿರೂಪಿಸಿದರು. ಕೊನೆಗೆ ಬಸವರಾಜ ಅರಮನಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಡಾ.ಪಂ.ಪುಟ್ಟರಾಜ ಗವಾಯಿಗಳವರ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಪಾದಯಾತ್ರೆ ನಡೆಸಿ ಸಂಘದ ಕಾರ್ಯಾಲಯ ತಲುಪಿ ಸಭೆ ನಡೆಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಅಧ್ಯಕ್ಷ ಮಾಬುಖಾನ್ ಜಿ.ಪಠಾಣ, ಸರ್ವ ಕಾರ್ಮಿಕರ ಸಂಘಟನೆಗಳು ಒಗ್ಗೂಡಿಕೊಂಡು ಈ ಕಾರ್ಯಕ್ರಮ ಏರ್ಪಡಿಸಿದ್ದು ಸಂಘಟನೆಗೆ ಬಲ ನೀಡಿದಂತಾಗಿದೆ. ಜೊತೆಗೆ ಸಂಘವು ಸ್ವಂತ ಕಟ್ಟಡ ನಿರ್ಮಿಸಿಕೊಳ್ಳುವಲ್ಲಿ ಎಲ್ಲ ಕಾರ್ಮಿಕರೂ ನನ್ನೊಂದಿಗೆ ಕೈಜೋಡಿಸಿ, ಬರಲಿರುವ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲವರ್ಧನೆ ಮಾಡುವ ಮೂಲಕ ಸಂಘದ ಕಟ್ಟಡವನ್ನು ಪೂರ್ಣ ಪ್ರಮಾಣದಲ್ಲಿ ಸುಂದರಗೊಳಿಸಲಾಗುವದು ಎಂದರು.

Spread the love
Advertisement

LEAVE A REPLY

Please enter your comment!
Please enter your name here