ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಇಲ್ಲಿನ ರೋಣ ರಸ್ತೆಯ ಎಪಿಎಂಸಿ ಎದುರಿನ ಪುರಸಭೆ ಬಯಲು ಜಾಗೆಯಲ್ಲಿ ಗುರುವಾರ ಸಂಜೆ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರವಾಗಿ ಬಹಿರಂಗ ಸಭೆ ಉದ್ಘಾಟಿಸಿ, ಮತಯಾಚಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ರಾಜ್ಯದಲ್ಲಿ ವಿಷದ ಬೀಜ ಬಿತ್ತಿ, ಜನರನ್ನು ಒಡೆದಾಳುವ ನೀತಿಯನ್ನು ಅನುಸರಿಸಿ ಅಧಿಕಾರಕ್ಕೆ ಬರುವ ಕನಸನ್ನು ಕಾಣುತ್ತಿದೆ. ಆದರೆ ಆ ಕನಸು ಯಾವುದೇ ಕಾರಣಕ್ಕೂ ನನಸಾಗುವದಿಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಂಡ ಪರಿಣಾಮ ಪಾಲಿಗೆ ಇಲ್ಲದಂತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರಗಾಲ ಎದುರಾಗಲಿದೆ. ನಾವು ಅಧಿಕಾರದಲ್ಲಿದ್ದರೆ ಜಲಾಶಯಗಳು ತುಂಬಿ ತುಳಕುತ್ತವೆ. ರೈತರು ನೆಮ್ಮದಿ ಹಾಗೂ ಸ್ವಾಭಿಮಾನದ ಬದುಕು ಸಾಗಿಸಲು ಅವಕಾಶ ಮಾಡಲು ರೈತರ ಸಂಪೂರ್ಣ ಸಾಲಮನ್ನಾ ಮಾಡಿ. ಇಲ್ಲದಿದ್ದರೆ ನಿಮ್ಮ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸುವ ಶಕ್ತಿ ನನ್ನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ವ್ಯಾಪಕ ಭ್ರಷ್ಟಾಚಾರ, ಲೂಟಿಯಲ್ಲಿ ತೊಡಗಿದೆ. ಕಾಂಗ್ರೆಸ್‌ನವರು ಯಾವ ಮುಖವನ್ನು ಇಟ್ಟುಕೊಂಡು ಜನರ ಮತ ಕೇಳುತ್ತಾರೆ? ಹಣ, ಹೆಂಡ ಹಾಗೂ ಅಧಿಕಾರದ ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವ ಅಹಂನಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ. ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದ್ದು, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ನಿಲ್ಲಲು ಅಭ್ಯರ್ಥಿಗಳು ಸಿಗದ ಸ್ಥಿತಿ ಬರಲಿದೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ದೇಶದ ಭವಿಷ್ಯ ಅಡುಗಿದೆ.
ರೋಣದಲ್ಲಿ ನಾನು ಸೋತಿದ್ದೇನೆ, ಇಲ್ಲಿ ಏನಾದರೂ ತೊಂದರೆ ಆದರೆ ರೋಣಕ್ಕೆ ಮಾತ್ರವಾಗಲಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ದೇಶಕ್ಕೆ ಅಪಾಯ ಎದುರಾಗಲಿದೆ ಎಂದರು.
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಎಂ.ವಾಯ್. ಮುಧೋಳ, ನಿಂಗಪ್ಪ ಕೆಂಗಾರ, ಮುತ್ತಣ್ಣ ಕಡಗದ, ಕನಕಪ್ಪ ಅರಳಿಗಿಡದ, ಸಿದ್ದಣ್ಣ ಬಳಿಗೇರ, ಬಸವರಾಜ ಬಂಕದ, ಉಮೇಶ ಮಲ್ಲಾಪೂರ, ಬಿ.ಎಂ. ಸಜ್ಜನರ, ಕಾಂತಿಲಾಲ ಬನ್ಸಾಲಿ, ರಾಜೇಂದ್ರ ಘೋರ್ಪಡೆ, ಮುದಿಯಪ್ಪ ಮುಧೋಳ, ಲೀಲಾ ಸವಣೂರ, ಶ್ರೀನಿವಾಸ ಸವದಿ, ಮುತ್ತಣ್ಣ ಚೆಟ್ಟೇರ, ಉಮೇಶ ಚನ್ನುಪಾಟೀಲ ಸೇರಿ ಇತರರು ಇದ್ದರು.
ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ನ ಒಬ್ಬ ಶಾಸಕ ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಶಾಶ್ವತವಾಗಿ ವಿದ್ಯುತ್ ಕಟ್ ಮಾಡುವದಾಗಿ ಹೇಳಿದ್ದಾನೆ. ವಿದ್ಯುತ್ ಅವರ ಅಪ್ಪನ ಮನೆಯದ್ದಲ್ಲ. ಇವರು ಪ್ರಧಾನಮಂತ್ರಿಗಳ ಆಯುಷ್ಯದ ಬಗ್ಗೆ ಮಾತನಾಡುವ ಕೆಳಮಟ್ಟಕ್ಕೆ ಕುಸಿದಿದ್ದಾರೆ. ಹಿಂದುಳಿದ ವರ್ಗಗಳಿಗೆ ನ್ಯಾಯ ನೀಡುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರ ಕೈಗೆ ವರದಿ ಸಿಕ್ಕು 3 ತಿಂಗಳು ಗತಿಸಿವೆ. ಆದರೆ ವರದಿ ಬಿಡುಗಡೆ ಮಾಡಿಲ್ಲ ಎಂದರು.