ವಿಜಯಸಾಕ್ಷಿ ಸುದ್ದಿ, ಗದಗ : ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಾಗಿರುವುದು ಕೇವಲ ಬೆರಳೆಣಿಕೆಯಷ್ಟು ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಿರುದ್ಯೋಗದ ಪ್ರಮಾಣವು ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ದಾಖಲಾದ ವರ್ಷ 2023 ಆಗಿದೆ. ಸರಾಸರಿ ಪ್ರಮಾಣದಲ್ಲಿ ನೋಡಿದರೆ ಶೇ. 8ಕ್ಕಿಂತ ಹೆಚ್ಚು ನಿರುದ್ಯೋಗವು ದೇಶದಲ್ಲಿದೆ. ಒಟ್ಟಾರೆ 18ರಿಂದ 59 ವರ್ಷಗಳ ಒಳಗಿನ ದುಡಿಯುವ ಜನರು ಶೇ. 5ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸರ್ಕಾರಿ ನೌಕರರಿದ್ದಾರೆ. ಇದೂ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೆ, ಅದಾನಿ, ಅಂಬಾನಿ ಹಾಗೂ ಕೆಲವು ಮಾಧ್ಯಮಗಳು ತಮ್ಮ ಹಿತಾಸಕ್ತಿಗಾಗಿ ದುಡಿಯುತ್ತಿರುವ ಮೋದಿ ಅವರನ್ನು ವಿಶ್ವಗುರು ಎಂದು ಸುಳ್ಳು ಹೇಳಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಹಣದುಬ್ಬರ, ಬೆಲೆ ಏರಿಕೆಗಳನ್ನು ಕಳೆದು ನೋಡಿದರೆ ಜನರ ಕೈಯಲ್ಲಿ ಏನೂ ಉಳಿಯುತ್ತಿಲ್ಲ. ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಔಷಧ, ಪೆಟ್ರೋಲ್, ಡೀಸೆಲ್, ಗ್ಯಾಸ್ ಎಲ್ಲವುಗಳ ಬೆಲೆ ಮಾತ್ರ ಎರಡು ಪಟ್ಟು, ಮೂರು ಪಟ್ಟು ಹೆಚ್ಚಾಗಿವೆ. ಆದರೆ ಕಾರ್ಮಿಕರ ದುಡಿಮೆ ಮಾತ್ರ ಕಡಿಮೆಯಾಗಿದೆ. ನಿರೀಕ್ಷೆ ಮಾಡಿದ್ದರಲ್ಲಿ ಶೇ. 60ರಷ್ಟು ಉದ್ಯೋಗಗಳೂ ಸೃಜನೆಯಾಗುತ್ತಿಲ್ಲ. ಒಂದರ್ಥದಲ್ಲಿ ಮುಂದಕ್ಕೆ ನಡೆಯುವ ಬದಲು ಹಿಂದಕ್ಕೆ ನಡೆಯುತ್ತಿದೆ. ಆದ್ದರಿಂದ, ಯುವ ಜನತೆ ಕಾಂಗ್ರೆಸ್‌ನ್ನು ಬೆಂಬಲಿಸಿ, ಆಶೀರ್ವದಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.