ಬೊಮ್ಮಾಯಿಯವರಿಗೆ ಮತ ಕೇಳುವ ಹಕ್ಕಿಲ್ಲ : ಡಿ.ಕೆ. ಶಿವಕುಮಾರ

0
shivakumar
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬೊಮ್ಮಾಯಿ ಪಕ್ಕದ ಹಾವೇರಿ ಜಿಲ್ಲೆಯವರು. ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರು. ಸದ್ಯ ಅವರು ಸ್ಪರ್ಧಿಸುತ್ತಿರುವ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಜನ ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಬೊಮ್ಮಾಯಿಯವರಿಗೆ ಮತ ಕೇಳುವ ಹಕ್ಕಿಲ್ಲ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

Advertisement

ಶನಿವಾರ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಎದುರಿಸಿತು. ಜನ ಬೊಮ್ಮಾಯಿ ಅವರನ್ನು ತಿರಸ್ಕರಿಸಿದರು. ಹಾವೇರಿ ಜಿಲ್ಲೆಯನ್ನೇ ಗೆಲ್ಲಲಾಗದವರು ಈಗ ಹಾವೇರಿ-ಗದಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜನ ಬೊಮ್ಮಾಯಿ ಅವರನ್ನು ಮತ್ತೊಮ್ಮೆ ತಿರಸ್ಕರಿಸಿ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ನುಡಿದಂತೆ ನಡೆದಿಲ್ಲ. ಆ ಕಾರಣಕ್ಕಾಗಿ ಮೂರು ಬಾರಿ ಸಂಸದರಾಗಿದ್ದ ಶಿವಕುಮಾರ ಉದಾಸಿ ಸ್ಪರ್ಧೆಯಿಂದ ಹಿಂದೆ ಸರಿದರು. ಈ ಬಾರಿ ಸ್ಪರ್ಧೆ ಮಾಡಿದರೆ, ಜನ ಪ್ರಶ್ನಿಸದೇ ಬಿಡುವುದಿಲ್ಲ ಎನ್ನುವ ಭಯ ಅವರನ್ನು ಕಾಡಿತ್ತು. ಶಿವಕುಮಾರ ಉದಾಸಿ ಮಾತ್ರವಲ್ಲ, ರಾಜ್ಯದ 14 ಜನ ಸಂಸದರು ಇದೇ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಆದರೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪಿಸಿದರು. ಇಂದು ಯಾರು ದಾರಿ ತಪ್ಪಿದ್ದಾರೆ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತಾಗಿದೆ ಎಂದ ಡಿ.ಕೆ. ಶಿವಕುಮಾರ, ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಚಿತ್ರನಟ ಸಾಧು ಕೋಕಿಲಾ, ಸಚಿವ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ಶ್ರೀನಿವಾಸ ಮಾನೆ, ರೋಣ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ, ಶಾಸಕ ವಿನಯ ಕುಲಕರ್ಣಿ, ಪಾಂಡಿಚೇರಿ ಮಾಜಿ ಸಿಎಂ ನಾರಾಯಣಸ್ವಾಮಿ, ಎಐಸಿಸಿ ವೀಕ್ಷಕ, ಮಯೂರ ಕುಮಾರ ಬಿ., ನಿಕೇತರಾಜ್ ಮೌರ್ಯ, ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮುಂತಾದವರು ಉಪಸ್ಥಿತರಿದ್ದರು.

 

ಗದಗ ಕ್ಷೇತ್ರದ ಮಾಜಿ ಸಚಿವ ದಿ. ಕೆ.ಎಚ್. ಪಾಟೀಲರು ನನಗೆ ಮೊದಲ ಬಾರಿಗೆ ಟಿಕೆಟ್ ಕೊಟ್ಟವರು. ಅಂದಿನಿಂದ ಇಂದಿನವರೆಗೆ ಸತತ 8 ಬಾರಿ ವಿಧಾನಸಭೆ ಪ್ರವೇಶಿಸಿ, ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟು ಜನಸೇವೆ ಮಾಡಲು ಸಾಧ್ಯವಾಯಿತು.
– ಡಿ.ಕೆ. ಶಿವಕುಮಾರ.
ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ.


Spread the love

LEAVE A REPLY

Please enter your comment!
Please enter your name here