ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯ

0
mustering
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಚುನಾವಣೆ ಸಂಬಂಧ ಮಸ್ಟರಿಂಗ್ ಕಾರ್ಯವು ಶಿರಹಟ್ಟಿಯ ಎಫ್.ಎಂ. ಡಬಾಲಿ ಪಿ.ಯು ಕಾಲೇಜು, ಗದಗ ನಗರದ ಗುರುಬಸವ ಸಿಬಿಎಸ್‌ಇ ಶಾಲೆ, ರೋಣದ ಡಿ ಪೌಲ್ ಅಕಾಡೆಮಿ ಹಾಗೂ ನರಗುಂದದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೋಮವಾರ ಸುಸೂತ್ರವಾಗಿ ನಡೆಯಿತು.

Advertisement

ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯ 961 ಮತಗಟ್ಟೆಗಳಿಗೆ ನಿಯೋಜಿಸಿರುವ ಎಲ್ಲಾ ಹಂತದ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ತಮಗೆ ಹಂಚಿಕೆಯಾದ ಮತಗಟ್ಟೆಯ ಸಂಖ್ಯೆಯನ್ನು ತಿಳಿದುಕೊಂಡು,ನಿಗದಿಪಡಿಸಿದ ಕೌಂಟರ್‌ಗೆ ತೆರಳಿ ತಮ್ಮ ಮತಗಟ್ಟೆಗೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡು ಪರಸ್ಪರ ಚರ್ಚಿಸಿದರು.

ಬಳಿಕ ಮತಗಟ್ಟೆ ಅಧಿಕಾರಿಗಳು ಸೆಕ್ಟರ್ ಅಧಿಕಾರಿಗಳಿಂದ ಚುನಾವಣೆ ಸಂಬಂಧ ಮಾಹಿತಿ ಪಡೆದು, ಮತಗಟ್ಟೆ ಕಾರ್ಯನಿರ್ವಹಣೆಯ ಸಾಮಗ್ರಿಗಳನ್ನು ಪಡೆದರು. ಚುನಾವಣಾ ಸಾಮಾನ್ಯ ವೀಕ್ಷಕರಾದ ಆದೇಶ್ ಟೈಟಮಾರೆ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿ.ಪಂ ಸಿಇಒ ಎಸ್.ಭರತ್, ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಇತರರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.

vaishali

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಗದಗ ನಗರ ಸೇರಿದಂತೆ ವಿವಿಧ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಮಾರ್ಗದರ್ಶನ ನೀಡಿದರು.

ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ 189 ಮಾರ್ಗಗಳನ್ನು ಗುರುತಿಸಲಾಗಿದ್ದು, ಈ ಮಾರ್ಗದಲ್ಲಿ 132 ಕೆಎಸ್‌ಆರ್‌ಟಿಸಿ ಬಸ್ಸುಗಳು, 82 ಜೀಪು, 22 ಮಿನಿ ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮತಗಟ್ಟೆ ಅಧಿಕಾರಿಗಳಿಗೆ ಆರೋಗ್ಯ ಕಿಟ್, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

kit

ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ ಸಿಇಒ ಎಸ್.ಭರತ್ ಮಾತನಾಡಿ, ಜಿಲ್ಲೆಯಲ್ಲಿ 35 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 20 ಸಖಿ ಬೂತ್‌ಗಳು, ತಲಾ 4 ಸಾಂಪ್ರದಾಯಿಕ, ವಿಶೇಷ ಚೇತನ ಮತಗಟ್ಟೆಗಳು, ಯುವ ಮತದಾರರ ಮತಗಟ್ಟೆಗಳು ಹಾಗೂ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರಲ್ಲದೆ, ಈ ಬಾರಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೇಕಡಾವಾರು ಮತದಾನ ಹೆಚ್ಚಳಕ್ಕೆ ಶ್ರಮಿಸಲಾಗಿದೆ ಎಂದರು. ಉಪ ವಿಭಾಗಾಧಿಕಾರಿ ವೆಂಕಟೇಶ ನಾಯ್ಕ ಸೇರಿದಂತೆ ಇತರರು ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಸುಮಾರು 2000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here