HomeDharwadಕುಡಿಯುವ ನೀರಿನ ಸಮಸ್ಯೆ ನಿವಾರಣೆ

ಕುಡಿಯುವ ನೀರಿನ ಸಮಸ್ಯೆ ನಿವಾರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಮೇ 14ರಿಂದ 23ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕು ವ್ಯಾಪ್ತಿಯ 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗುವುದೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರಗಾಲದ ನಡುವೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ 10 ದಿನಗಳ ಕಾಲ ನಿರಂತರ ಮಲಪ್ರಭಾ ಬಲದಂಡೆ ಕಾಲುವೆಗಳಿಂದ 0.5 ಟಿಎಂಸಿ (600 ಕ್ಯೂಸೆಕ್ಸ್) ನೀರನ್ನು ನಾಲ್ಕು ತಾಲೂಕುಗಳ 58 ಕೆರೆಗಳಿಗೆ ಬಿಡಲಾಗುವುದು.
ನವಲಗುಂದ ತಾಲೂಕಿನ 37 ಕೆರೆ, ಅಣ್ಣಿಗೇರಿಯ 13, ಹುಬ್ಬಳ್ಳಿಯ 7 ಹಾಗೂ ಕುಂದಗೋಳದ 3 ಪೂರಕ ಸಂಗ್ರಹಣಾ ಕೆರೆಗಳನ್ನು ಭರ್ತಿ ಮಾಡಲಾಗುವುದು. ಆಯಾ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ನೀರಾವರಿ ಇಲಾಖೆ ಎಇಇಗಳು ಕ್ರಿಯಾಶೀಲರಾಗಿ ನಿಗಾ ವಹಿಸಿತಕ್ಕದ್ದು ಎಂದು ಅವರು ತಿಳಿಸಿದರು.
ಕಾಲುವೆಗೆ ಹರಿಸಲಾದ ನೀರು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆಯಾಗಬೇಕು. ಕುಡಿಯುವ ನೀರು ಹೊರತುಪಡಿಸಿ ಇನ್ಯಾವುದೇ ಉದ್ದೇಶಕ್ಕಾಗಿ ಬಳಕೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನೀರಾವರಿ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ, ಪೊಲೀಸ್ ಹಾಗೂ ಗ್ರಾಮೀಣ ಕುಡಿಯುವ ನೀರು ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೂರು ತಂಡಗಳನ್ನು ಮೂರು ಶಿಫ್ಟ್ಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ನಾಲ್ಕು ತಾಲೂಕುಗಳ 7 ಉಪ ವಿಭಾಗಗಳ ಸುಮಾರು 90 ಕಿ.ಮೀ. ವ್ಯಾಪ್ತಿಯ ಕಾಲುವೆ ಸುತ್ತ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿ.ಪಂ ಉಪಕಾರ್ಯದರ್ಶಿ ವಿಜಯಕುಮಾರ ಅಜೂರ, ಮಲಪ್ರಭಾ ಯೋಜನಾ ವಲಯದ ಸುಪರಿಂಟೆಂಡೆಂಟ್ ಇಂಜಿನಿಯರ್ ಡಾ. ಎಸ್.ಬಿ. ಮಲ್ಲಿಗವಾಡ, ಬ್ಯಾಹಟ್ಟಿ ವಿಭಾಗದ ಇಇ ಮನೋಹರ ಬಿಸ್ನಾಳ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಇಇ ಆರ್.ಎಂ. ಸೊಪ್ಪಿಮಠ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಬರಗಾಲ ಸ್ಥಿತಿಯಾಗಿರುವುದರಿಂದ 58 ಕೆರೆಗಳನ್ನು ಸಂಪೂರ್ಣ ಭರ್ತಿ ಮಾಡಲಾಗುವುದು. ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಕ್ಕೆ ನೀರು ಬಳಕೆಯಾಗದಂತೆ ಆಯಾ ವ್ಯಾಪ್ತಿಯ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರು, ಪಿಡಿಓ ಗ್ರಾಮಲೆಕ್ಕಿಗರು, ಪೊಲೀಸ್ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಚುರುಕಾಗಿ ಕಾರ್ಯನಿರ್ವಹಿಸಬೇಕೆಂದರು. ಹೆಸ್ಕಾಂ ಅಧಿಕಾರಿಗಳು ನೀರು ಹರಿಸುವ ಸಮಯದಲ್ಲಿ ಎಲ್ಲ ಐಪಿ ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು. ಸೆಕ್ಷನ್ ಅಧಿಕಾರಿಗಳನ್ನು ಇದಕ್ಕೆ ನೇಮಿಸಲಾಗುವುದೆಂದು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಕುಮಾರ ತಿಳಿಸಿದರು. 

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!