ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಮೇ 28ರಂದು ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಕಟ್ಟಡ ಕಾರ್ಮಿಕರ ಪ್ರಥಮ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಕೆ.ಎಸ್. ಜನಾರ್ಧನ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡರು.
ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳ ಸಮ್ಮೇಳನವನ್ನು ಮೇ.19ರಂದು ನಡೆಸಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮ್ಮೇಳನ ಸಂಚಾಲನ ಸಮಿತಿ ರಚಿಸಲಾಗಿ, ಸಂಚಾಲಕರಾಗಿ ಎಸ್.ಎ. ಗಫಾರ್. ಎ.ಎಲ್. ತಿಮ್ಮಣ್ಣ, ನೂರ್ ಸಾಬ್ ಹೊಸಮನಿ, ತುಕಾರಾಮ್ ಬಿ. ಪಾತ್ರೋಟಿ, ರಾಜಾಸಾಬ್ ತಹಸೀಲ್ದಾರ್, ರಾಜಪ್ಪ ಚೌಹಾಣ್, ಜಾಫರ್ ಕುರಿ, ಮೌಲಾ ಹುಸೇನ್ ಹಣಗಿ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಭಾರತ್ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹುಲುಗಪ್ಪ ಅಕ್ಕಿ ರೊಟ್ಟಿ ವಹಿಸಿದ್ದರು. ಕವಲೂರ ಗ್ರಾಮ ಘಟಕದ ಮುಖಂಡ ಶಂಶುದ್ದೀನ್ ಮಕಾಂದಾರ್, ಮಂಜುನಾಥ್ ಗುಗ್ರಿ ಮುಂತಾದವರು ಭಾಗವಹಿಸಿದ್ದರು.