`ಮನೇಲಿ ಒಂದಿಷ್ಟು ಬಂಗಾರವಿದ್ರೆ ಆಪದ್ಧನ ಇದ್ದಂಗೆ ಕಣಯ್ಯಾ. ಕಷ್ಟಕಾಲಕ್ಕೆ ಕೈಹಿಡಿಯುತ್ತೆ…’ ಅನ್ನೋ ಮಾತು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಯಾವುದೋ ಅನಿರೀಕ್ಷಿತ ಖರ್ಚು ಎದುರಾದಾಗ, ದುಡ್ಡು ಹೊಂದಿಸಲು ಯಾವುದೇ ಮಾರ್ಗಗಳು ಕಾಣದೇ ಇದ್ದಾಗ, ಮೈಮೇಲಿರುವ ಬಂಗಾರದ ಆಭರಣಗಳನ್ನೆಲ್ಲಾ ತೆಗೆತೆಗೆದು ಗಂಡನ ಕೈಗಿಡುವ ಸೀನ್‌ಗಳನ್ನೂ ಸಾಕಷ್ಟು ಸಿನಿಮಾಗಳಲ್ಲೂ ನೋಡಿದ್ದೇವೆ. ಇಂಥದ್ದನ್ನೆಲ್ಲಾ ನೋಡಿಯೇ ಗೋಲ್ಡ್ ಫೈನಾನ್ಸ್ ಕಂಪನಿಗಳು `ಮನೆಯಲಿ ಇದ್ದರೆ ಚಿನ್ನಾ, ಚಿಂತೆಯು ಏತಕೆ ಇನ್ನಾ…’ ಎಂಬ ಜಾಹೀರಾತು ಮಾಡಿರಬಹುದಾ? ಗೊತ್ತಿಲ್ಲ!
ಹಾಗಾದರೆ, ಇರುವ ಹಣವನ್ನೆಲ್ಲಾ ಚಿನ್ನದ ಮೇಲೆ ಹೂಡಿಕೆ ಮಾಡಿಬಿಡಬಹುದಾ? ದುಡ್ಡಾದರೆ ಆಗಾಗ ನೋಟ್ ಬ್ಯಾನ್ ಇತ್ಯಾದಿ ತಲೆನೋವು ತಂದಿಡುತ್ತವೆ. ಬಂಗಾರದ ಮೇಲೆ ಹಣ ಹೂಡಿ ಮನೆಯಲ್ಲೋ, ಬ್ಯಾಂಕ್‌ಗಳ ಸೇಫ್ ಲಾಕರ್‌ನಲ್ಲೋ ಕೂಡಿಟ್ಟರೆ ತಲೆಬಿಸಿ ಇಲ್ಲವಲ್ಲ ಅಂತ ಎಷ್ಟೋ ಜನ ಅಂದುಕೊಂಡಿರಲೂಬಹುದು. ಆದರೆ, ಮನೆಯಲ್ಲಿ ನೀವು ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು, ಇದಕ್ಕೆ ಸರ್ಕಾರ ವಿಧಿಸಿರುವ ಮಿತಿಗಳು ಮತ್ತು ಆದಾಯ ತೆರಿಗೆ ನಿಯಮಗಳ ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು.
ಚಿನ್ನ ನಮ್ಮ ದೇಶದಲ್ಲಿ ಅಮೂಲ್ಯ ಲೋಹ ಎಂಬುದರಲ್ಲಿ ಅನುಮಾನವೇ ಇಲ್ಲ ಬಿಡಿ. ಆದರೆ, ಅಮೂಲ್ಯ ಲೋಹವನ್ನು ಮನೆಯಲ್ಲಿ ಸುರಕ್ಷಿತವಾಗಿ ಮತ್ತು ಸುಭದ್ರವಾಗಿ ಸಂಗ್ರಹಿಸಿಟ್ಟುಕೊಳ್ಳಲೂ ಮಿತಿಯಿದೆ. ದೇಶದ ಬಹುತೇಕ ಪ್ರತಿಯೊಂದು ಕುಟುಂಬವೂ ಆಭರಣಗಳು ಮತ್ತು ಕೆಲವೊಮ್ಮೆ ನಾಣ್ಯಗಳು ಮತ್ತು ಚಿನ್ನದ ಹೂಡಿಕೆ ಯೋಜನೆಗಳ ರೂಪದಲ್ಲಿ ಕನಿಷ್ಠ ಸ್ವಲ್ಪ ಪ್ರಮಾಣದ ಚಿನ್ನವನ್ನಾದರೂ ಇಟ್ಟುಕೊಂಡಿರುತ್ತಾರೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಾರ, ಬಹಿರಂಗಪಡಿಸಿದ ಆದಾಯ ಮೂಲಗಳಿಂದ ಮಾಡಿದ ಚಿನ್ನ ಖರೀದಿ ಮತ್ತು ಕೃಷಿ ಆದಾಯ, ಕಾನೂನುಬದ್ಧವಾಗಿ ಆನುವಂಶಿಕವಾಗಿ ಪಡೆದ ಹಣ ಮತ್ತು ಸಮಂಜಸವಾದ ಪ್ರಮಾಣದ ಗೃಹ ಉಳಿತಾಯಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.
ಸಿಬಿಡಿಟಿ ನಿಯಮದಂತೆ ಅವಿವಾಹಿತ ಮಹಿಳೆ 250 ಗ್ರಾಂ, ಅವಿವಾಹಿತ/ವಿವಾಹಿತ ಪುರುಷ 100 ಗ್ರಾಂ, ವಿವಾಹಿತ ಮಹಿಳೆ 500 ಗ್ರಾಂ ಬಂಗಾರವನ್ನು ಹೊಂದಿರಲು ಸಮ್ಮತಿಯಿದೆ. ಸಿಬಿಡಿಟಿಯ ಹೊಸ ಸುತ್ತೋಲೆಯ ಪ್ರಕಾರ, ಪುರುಷರು ತಮ್ಮ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಆಭರಣಗಳು ಅಥವಾ ಇನ್ನಾವುದೇ ರೂಪದಲ್ಲಿ 100 ಗ್ರಾಂ ಚಿನ್ನವನ್ನು ಹೊಂದಬಹುದಷ್ಟೇ. ನೀವು ಖರೀದಿಸಿದ 3 ವರ್ಷಗಳ ಒಳಗೆ ನಿಮ್ಮ ಚಿನ್ನವನ್ನು ಮಾರಾಟ ಮಾಡಿದರೆ, ಸರ್ಕಾರವು ಅದರ ಮೇಲೆ ಅಲ್ಪಾವಧಿಯ ಬಂಡವಾಳ ಲಾಭ ತೆರಿಗೆಯನ್ನು ನಿರ್ಣಯಿಸುತ್ತದೆ. ಮತ್ತು ನೀವು 3 ವರ್ಷಗಳ ಮಿತಿಯನ್ನು ಮೀರಿ ಚಿನ್ನವನ್ನು ಮಾರಾಟ ಮಾಡಿದರೆ, ನೀವು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ, ದುಡ್ಡಿದೆ ಅಂತ ಮನಬಂದಷ್ಟು ಬಂಗಾರವನ್ನು ಸಂಗ್ರಹಿಸುವಂತೆಯೂ ಇಲ್ಲ.
ಅಂದಹಾಗೆ, ಚಿನ್ನದ ಮೇಲಿನ ಹೂಡಿಕೆಯಲ್ಲಿಯೂ ಕೆಲ ವಿಧಗಳಿವೆ ನೋಡಿ.
ಡಿಜಿಟಲ್ ಗೋಲ್ಡ್: ಇದು ಭೌತಿಕ ಚಿನ್ನಕ್ಕೆ ಹೋಲಿಸಿದರೆ ಆರ್‌ಓಐ ವಿಷಯದಲ್ಲಿ ಹೆಚ್ಚು ಲಾಭದಾಯಕವಾಗಿದೆ. ತಮ್ಮ ಡಿಜಿಟಲ್ ಚಿನ್ನದ ಖರೀದಿಯ ಆಧಾರದ ಮೇಲೆ, ವ್ಯಕ್ತಿಗಳು ಖರೀದಿಸುವಾಗ ಜಿಎಸ್‌ಟಿ ಮತ್ತು ಇತರ ಸಣ್ಣ ಶುಲ್ಕಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ. ಕಾನೂನಿನ ಪ್ರಕಾರ, ಡಿಜಿಟಲ್ ಚಿನ್ನಕ್ಕೆ ಯಾವುದೇ ಖರೀದಿ ಗರಿಷ್ಠ ಮಿತಿ ಇಲ್ಲ. ಡಿಜಿಟಲ್ ಚಿನ್ನದ ಖರೀದಿಗಾಗಿ ವ್ಯಕ್ತಿಗಳು ಒಂದೇ ದಿನದಲ್ಲಿ 2 ಲಕ್ಷ ರೂ.ವರೆಗೆ ಖರ್ಚು ಮಾಡಬಹುದು. ಇದಲ್ಲದೆ, ಡಿಜಿಟಲ್ ಚಿನ್ನವು 3 ವರ್ಷಗಳಿಗಿಂತ ಕಡಿಮೆ ಅವಧಿಗೆ ಅಲ್ಪಾವಧಿಯ ಲಾಭ ತೆರಿಗೆಯನ್ನು ಹೊಂದಿಲ್ಲ. ಆದಾಗ್ಯೂ, ಒಬ್ಬರು ಶೇ.20ರ ದರದಲ್ಲಿ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಸವರನ್ ಗೋಲ್ಡ್ ಬಾಂಡ್: ಸವರನ್ ಗೋಲ್ಡ್ ಬಾಂಡ್ (ಎಸ್‌ಜಿಬಿ)ನಂತಹ ಚಿನ್ನದ ಹೂಡಿಕೆ ಯೋಜನೆಗಳಲ್ಲಿ ಭಾರತೀಯ ನಾಗರಿಕರಿಗೆ ವರ್ಷಕ್ಕೆ ಗರಿಷ್ಠ 4 ಕೆಜಿಗೆ ಸಮಾನವಾದ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶವಿದೆ. ಇದಲ್ಲದೆ, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಮೇಲಾಧಾರವಾಗಿ ಬಳಸುವ ಹಿಡುವಳಿಗಳನ್ನು ಹೂಡಿಕೆ ಪೋಟ್‌ಪೋಲಿಯೊದಿಂದ ಹೊರಗಿಡಲಾಗುತ್ತದೆ.
ಎಸ್‌ಜಿಬಿ ಪಡೆಯುವ ಬಡ್ಡಿದರವು ವರ್ಷಕ್ಕೆ ಶೇ.2.5 ಆಗಿರುತ್ತದೆ. ಇದನ್ನು ಖರೀದಿದಾರರ ತೆರಿಗೆ ವಿಧಿಸಬಹುದಾದ ಆದಾಯಕ್ಕೆ ಸೇರಿಸಲಾಗುತ್ತದೆ. ಇದಲ್ಲದೆ, ಎಸ್‌ಜಿಬಿ ಖರೀದಿಗೆ ಯಾವುದೇ ಬಾಹ್ಯ ವೆಚ್ಚವು ಸಂಬಂಧಿಸುವುದಿಲ್ಲ. ಏಕೆಂದರೆ ನೀವು ಅವುಗಳ ಮೇಲೆ ಯಾವುದೇ ಜಿಎಸ್‌ಟಿ ಪಾವತಿಸಬೇಕಾಗಿಲ್ಲ.
ಗೋಲ್ಡ್ ಇಟಿಎಫ್-ಮ್ಯೂಚುವಲ್ ಫಂಡ್: ಮ್ಯೂಚುವಲ್ ಫಂಡ್‌ಗಳು ಮತ್ತು ಗೋಲ್ಡ್ ಇಟಿಎಫ್‌ಗಳನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಇರಿಸಿದರೆ, ವ್ಯಕ್ತಿಗಳು ಮಾರಾಟ ಮಾಡುವಾಗ ಫಂಡ್‌ಗಳ ಮೇಲೆ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.