ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಗದಗ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಇವುಗಳ ಸಂಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಕೃಷ್ಣಾ ಕಾರ್ಯಕ್ರಮದ ಕುರಿತು, ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಉಪಯುಕ್ತ ಸಲಹೆಗಳನ್ನು ನೀಡಿದರು. ಅತಿಥಿ ಡಾ. ಧಣಿಕುಮಾರ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಬಗ್ಗೆ ಅರಿವು ಮೂಡಿಸಿದರು.
ಮುಖ್ಯ ಅತಿಥಿಗಳಾದ ಸಿ.ಬಿ. ಪಲ್ಲೇದ ಮಾತನಾಡಿ, ಆರೋಗ್ಯ-ಕ್ಷೇಮಾಭಿವೃದ್ಧಿ ಹಾಗೂ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಬಗೆಗಿನ ಸೂಕ್ತ ಸಲಹೆಗಳನ್ನು ನೀಡಿದರು. ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡುತ್ತಾ ಇಂದಿನ ಯುವಕರು ದುಶ್ಚಟದಿಂದ ದೂರವಾಗಬೇಕು. ನಮ್ಮ ಗ್ರಾಮ-ಹಳ್ಳಿಗಳು ದೇಶದ ಜೀವನಾಡಿಗಳು. ಅವು ಸಮೃದ್ಧಿಯಾಗಲು ಇಂದಿನ ಯುವಕರು ವ್ಯಸನಮುಕ್ತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸುರೇಶ ಲಮಾಣಿ, ಎಂ.ಪಿ.ಎಚ್. (ಸಾರ್ವಜನಿಕ ಆರೋಗ್ಯ) ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಗ್ರಾಮೀಣ ವಾಸ್ತವ್ಯ ಮತ್ತು ಅಧ್ಯಯನದ ವಿದ್ಯಾರ್ಥಿಗಳು, ನರೇಗಾ ಕೂಲಿ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು ಎಂದು ಸುರೇಶ ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.