ಸ್ವಚ್ಛತೆ, ಆರೋಗ್ಯ ರಕ್ಷಣೆಗೆ ಗಮನ ನೀಡಿ : ವೈಶಾಲಿ ಎಂ.ಎಲ್

0
District Disaster Management Authority meeting
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕಾಲುವೆ ಮತ್ತು ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ಪರೀಕ್ಷಿಸಿ ಯೋಗ್ಯವಿದ್ದಲ್ಲಿ ಮಾತ್ರವೇ ಕುಡಿಯಲು ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಇಕ್ಕೆಲಗಳಲ್ಲಿ ಮತ್ತು ಚರಂಡಿಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಅನಗತ್ಯ ವಸ್ತುಗಳು ಸಂಗ್ರಹವಾಗಿ ನೀರು ಮುಂದೆ ಸಾಗದೇ ಅಲ್ಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಮಳೆ ನೀರು ಸರಾಗವಾಗಿ ಮುಂದೆ ಸಾಗುವಂತೆ ಚರಂಡಿಗಳ ಸ್ವಚ್ಛತೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಸಾರ್ವಜನಿಕರಿಗೆ ಕುಡಿಯಲು ಪೂರೈಕೆ ಮಾಡುತ್ತಿರುವ ನೀರು ಪರೀಕ್ಷಿಸಿ, ಯೋಗ್ಯವಿದ್ದಲ್ಲಿ ಸರಬರಾಜು ಮಾಡಬೇಕು. ಅಲ್ಲದೇ ಸಾರ್ವಜನಿಕರಿಗೆ ನೀರನ್ನು ಸಾಧ್ಯವಾದಷ್ಟು ಕುದಿಸಿ ಆರಿಸಿ ಕುಡಿಯಲು ತಿಳಿಹೇಳಬೇಕು ಎಂದರು.

ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಬಳಕೆ ಮಾಡಬೇಕು.

ಇಲ್ಲದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸಬಹುದು. ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳ ಹತೋಟಿ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುವಂತೆ ಸೂಚಿಸಿದರು.

ಜೂನ್ ಮೊದಲ ವಾರ ಅಧಿಕ ಮಳೆಯಾಗುವ ಸಂಭವವಿದ್ದು, ಇದರಿಂದ ಅತಿವೃಷ್ಟಿ ಎದುರಾಗುವ ಸಾಧ್ಯತೆಯಿದೆ. ಅಧಿಕಾರಿ ವರ್ಗ ಅತಿವೃಷ್ಟಿ ನಿರ್ವಹಣೆಗೆ ಸನ್ನದ್ಧರಾಗಬೇಕು. ಜನ-ಜಾನುವಾರು ಜೀವ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

District Disaster Management Authority meeting

ಗುಡುಗು, ಸಿಡಿಲು, ಮಳೆ ಮತ್ತು ಮುಂಜಾಗ್ರತೆ ಕುರಿತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಹಾಗೂ ವಾಟ್ಸ್ಅಪ್ ಗ್ರೂಪ್‌ಗಳಿಗೆ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಬಹುದಾದ 12 ಗ್ರಾಮ ಹಾಗೂ 14 ವಾರ್ಡ್ಗಳನ್ನು ಗುರುತಿಸಲಾಗಿದೆ. ಮಲಪ್ರಭ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹದಿಂದ ಪ್ರವಾಹಕ್ಕೊಳಗಾಗುವ ನರಗುಂದ ತಾಲೂಕಿನ 16 ಮತ್ತು ರೋಣ ತಾಲೂಕಿನ 16, ಹೀಗೆ ಒಟ್ಟು 32 ಗ್ರಾಮಗಳನ್ನು ಗುರುತಿಸಲಾಗಿದೆ. ತುಂಗಭದ್ರಾ ನದಿ ಪ್ರವಾಹದಿಂದ ಪ್ರವಾಹಕ್ಕೊಳಗಾಗುವ ಶಿರಹಟ್ಟಿ ತಾಲೂಕಿನ 10 ಮತ್ತು ಮುಂಡರಗಿ ತಾಲೂಕಿನ 11 ಒಟ್ಟು 21 ಗ್ರಾಮಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 46 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರವಾಹ ಮುಂಜಾಗ್ರತೆಗಾಗಿ ಅಗ್ನಿಶಾಮಕ ಇಲಾಖೆಯ ರಕ್ಷಣಾ ಸಾಮಗ್ರಿಗಳಾದ 49 ಲೈಫ್‌ಬಾಯ್, 50 ಲೈಫ್ ಜಾಕೆಟ್, 84 ರೋಪ್‌ಗಳು, 14 ಅಲ್ಯೂಮಿನಿಯಂ ಲ್ಯಾಡರ್, 24 ಉಸಿರಾಟದ ಸಲಕರಣೆಗಳು, 1 ಓಬಿಎಂ ಬೋಟ್‌ಗಳಿರುತ್ತವೆ. ಪ್ರವಾಹ ಸಂಭವಿಸಬಹುದಾದ ನರಗುಂದ ತಾಲೂಕಿನ ಕೊಣ್ಣೂರು, ರೋಣ ತಾಲೂಕಿನ ಹೊಳೆ ಆಲೂರು, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಶಿರಹಟ್ಟಿ ತಾಲೂಕಿನ ಮಜ್ಜೂರು 4 ಕಡೆಗಳಲ್ಲಿ ಗೋಶಾಲೆ ತೆರೆಯಲು ಗುರುತಿಸಲಾಗಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಾಪಾಲಕ ಅಭಿಯಂತರ ಶಿವಾನಂದ ಗೌಡರ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಸೇರಿದಂತೆ ಜಿಲ್ಲೆಯ ಆಯಾ ತಾಲೂಕುಗಳ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರವಾಹ ಮುಂಜಾಗ್ರತೆಗೆ ಕಂಟ್ರೋಲ್ ರೂಮ್‌ಗಳು
ಗದಗ ತಾಲೂಕು-08372-250009, ಗಜೇಂದ್ರಗಡ– 08381-298982, ಲಕ್ಷ್ಮೇಶ್ವರ-08487-273273, ಮುಂಡರಗಿ-08371-262237, ನರಗುಂದ-08377-245243, ರೋಣ-08381-267239, ಶಿರಹಟ್ಟಿ-08487-242100.

ನಗರದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಯಲು ನಗರಸಭೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ರಾಜಕಾಲುವೆಗಳ ಹಾಗೂ ಚರಂಡಿಗಳಲ್ಲಿನ ಭಗ್ನಾವಶೇಷಗಳನ್ನು ತೆರವುಗೊಳಿಸಬೇಕು. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಿಕೊಡಬೇಕು ಎಂದು ನಗರಸಭೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ನಿರ್ದೇಶಿಸಿದರು.

 


Spread the love

LEAVE A REPLY

Please enter your comment!
Please enter your name here