ವಿಜಯಸಾಕ್ಷಿ ಸುದ್ದಿ, ನರೇಗಲ್ : ಸ್ವಾತಂತ್ರ್ಯ ಭಾರತ ಹೇಗಿರಬೇಕು ಎಂಬ ಕನಸನ್ನು ಕಂಡು, ಅದನ್ನು ನನಸು ಮಾಡಲು ಶ್ರಮಿಸಿದವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರೂರವರು. ಆದ್ದರಿಂದ ಅವರನ್ನು ನವ್ಯ ಭಾರತದ ಕನಸುಗಾರ ಎಂದು ಕರೆಯಲಾಗುತ್ತದೆ ಎಂದು ಶಿವಾನಂದ ಗುಗ್ಗರಿ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಕಾಂಗ್ರೆಸ್ ಕಮಿಟಿಯ ಆಶ್ರಯದಲ್ಲಿ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಆಚರಿಸಲಾದ ಜವಾಹರಲಾಲ ನೆಹರೂ ಅವರ 61ನೇ ಪುಣ್ಯ ಸ್ಮರಣೆಯಲ್ಲಿ ಅವರು ಮಾತನಾಡಿದರು.
ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವುದು ಅವರ ಮೊದಲ ಕನಸಾಗಿತ್ತು. ಆಧುನಿಕ ಕೈಗಾರಿಕೆಗಳ ಸ್ಥಾಪನೆಗೆ ಅವರು ಮುಂದಾಗಿದ್ದು ಇದೇ ಕಾರಣಕ್ಕೆ. ಮಂದಿರ, ಮಸೀದಿ, ಚರ್ಚುಗಳ ನಿರ್ಮಾಣದಿಂದ ಭಾರತೀಯರ ಭವಿಷ್ಯ ನಿರ್ಮಾಣವಾಗುವುದಿಲ್ಲ, ಬದಲಾಗಿ ದುಡಿಯುವ ಕೈಗಳಿಗೆ ಕೆಲಸ ಕೊಟ್ಟರೆ ಅವರು ತಮ್ಮ ಅನ್ನವನ್ನು ತಾವು ಸಂಪಾದಿಸಿಕೊಳ್ಳುತ್ತಾರೆ. ಇದರಿಂದ ಭಾರತ ಆರ್ಥಿಕವಾಗಿ ಸ್ವಾತಂತ್ರ್ಯವಾಗುತ್ತದೆ ಎಂದು ನೆಹರು ಬಲವಾಗಿ ನಂಬಿದ್ದರು. ಭಾರತವನ್ನು ಶಕ್ತಿಶಾಲಿ ರಾಷ್ಟçವನ್ನಾಗಿ ಮಾಡುವುದರ ಜೊತೆಗೆ ಜ್ಞಾನ ಮತ್ತು ಮಿಲಿಟರಿ ಶಕ್ತಿಯ ಭಾರತವನ್ನಾಗಿ ನಿರ್ಮಿಸಲು ಅವರು ಕನಸು ಕಂಡಿದ್ದರು ಎಂದು ಹೇಳಿದರು.
ಶಂಭುಶಾಸ್ತಿç ಮಾಳಶೆಟ್ಟಿ ನೇತೃತ್ವ ವಹಿಸಿದ್ದರು. ಸುರೇಶ ಬಸವರಡ್ಡೇರ, ಬಸವರಾಜ ಪಲ್ಲೇದ, ಸುರೇಶ ಶಿರೋಳ, ಜಗದೀಶ ಅವರೆಡ್ಡಿ, ಮಲ್ಲಣ್ಣ ಬಸವರಡ್ಡೇರ, ಗುರಣ್ಣ ಅವರೆಡ್ಡಿ, ಹನುಮಂತಪ್ಪ ದ್ವಾಸಲ, ದೇವಣ್ಣ ಅಸುಂಡಿ, ಎಂ.ಡಿ. ಬಸವರಡ್ಡೇರ, ಶಿವಪುತ್ರಪ್ಪ ತಿಪ್ಪಶೆಟ್ಟಿ, ದುರುಗೇಶ ಬಂಡಿವಡ್ಡರ, ಬಾಬು ಬನ್ನಿಕೊಪ್ಪ, ಚನ್ನಬಸು ಹೂಗಾರ, ಬಸವರಾಜ ಗುಗ್ಗರಿ, ಶಿವಪುತ್ರಪ್ಪ ಕೆಂಗಾರ, ಲಕ್ಷ್ಮಣ ಹಿರೇಮನಿ, ಶರಣಪ್ಪಗೌಡ ಮಾದಿನೂರ, ಸೋಮು ಶಿರೋಳ, ಕುಮಾರ ಬಸವರಡ್ಡೇರ, ಅಂದಪ್ಪ ದ್ವಾಸಲ, ಗುರುಲಿಂಗಪ್ಪ ಬಸವರಡ್ಡೇರ, ಮಹಾಂತೇಶ ಇಮ್ರಾಪೂರ, ಮುತ್ತಪ್ಪ ಕೆಂಗಾರ, ರಡ್ಡೆಪ್ಪ ದ್ವಾಸಲ ಮುಂತಾದವರು ಉಪಸ್ಥಿತರಿದ್ದರು.
ಎ.ಎಚ್. ಖಾದ್ರಿ ಮಾತನಾಡಿ, 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನೆಹರೂ ಅವರು ಭಾರತವನ್ನು ಸಶಕ್ತ ರಾಷ್ಟçವನ್ನಾಗಿಸುವಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಮಾತ್ರ ಭವ್ಯ ಭಾರತದ ಅಭಿವೃದ್ಧಿಗೆ ಸಹಕಾರಿಯಾಗಬಲ್ಲವು ಎಂಬುದನ್ನು ಮನಗಂಡಿದ್ದ ನೆಹರು, ಆ ದಿಶೆಯಲ್ಲಿಯೂ ಬಹಳಷ್ಟು ಪ್ರಯತ್ನಗಳನ್ನು ಮಾಡಿ ಅದರಲ್ಲಿ ಯಶಸ್ವಿಯೂ ಆದರು. ಮಹಾನ್ ಮಾನವತಾವಾದಿಯಾಗಿ, ಜಗತ್ತಿನ ಮಹತ್ವದ ನಾಯಕರಾಗಿ ನೆಹರು ಬೆಳೆದರು ಎಂದು ಹೇಳಿದರು.