ಶಿಕ್ಷಣ ಬದುಕುವ ಕಲೆ ಕಲಿಸಬೇಕು : ಶ್ರೀ ಚನ್ನವೀರಮಹಾಸ್ವಾಮಿಗಳು

0
Silver Jubilee Celebrations and Mega Cultural Fair and Awards Programme
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೇವಸ್ಥಾನಗಳ ಘಂಟೆ-ಜಾಗಟೆಗಳ ನಿನಾದಕ್ಕಿಂತ ಶಾಲೆಯ ಘಂಟೆಯ ನಾದವೇ ಮೇಲು. ಶಿಕ್ಷಣ ಕೊಡುವುದು ಎಲ್ಲಕ್ಕಿಂತ ಶ್ರೇಷ್ಠ ಸೇವೆಯಾಗಿದೆ. ಆದ್ದರಿಂದ ಹಣ ಗಳಿಸುವ ಉದ್ದೇಶದಿಂದ ಶಾಲೆ ಆರಂಭಿಸದೇ ಜ್ಞಾನದ ಬೆಳಕು ಹರಡುವ ಉನ್ನತ ಧ್ಯೇಯ ಹೊಂದಿರಬೇಕು ಎಂದು ಹೂವಿನಶಿಗ್ಲಿ ಶ್ರೀ ಚನ್ನವೀರಮಹಾಸ್ವಾಮಿಗಳು ಹೇಳಿದರು.

Advertisement

ಅವರು ಪಟ್ಟಣದ ಬಿಸಿಎನ್ ಸ್ಪೆಕ್ಟ್ರಮ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಬೆಳ್ಳಿಹಬ್ಬದ ಸಂಭ್ರಮ, ಮಹಾಸಾಂಸ್ಕೃತಿಕ ಮೇಳ ಮತ್ತು ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗುಣಾತ್ಮಕ ಶಿಕ್ಷಣ ದೊರೆಯುವಂತೆ ಲಕ್ಷ್ಯ ವಹಿಸಬೇಕು. ಶಿಕ್ಷಣ ಬದುಕುವ ಕಲೆ ಕಲಿಸಬೇಕು. ಶಿಕ್ಷಣ ಕೇಂದ್ರಗಳು ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಸಿದ್ಧಗೊಳಿಸಬೇಕು. ಶಾಲೆ ಬರೀ ಅಂಕಗಳನ್ನು ಪಡೆದುಕೊಳ್ಳುವ ಕೇಂದ್ರಗಳಾಗದೇ ಮಕ್ಕಳ ಮನೋವಿಕಾಸ ಮತ್ತು ಪ್ರತಿಭೆಯನ್ನು ಪೋಷಿಸುವ ಕೇಂದ್ರಗಳಾಗಿ ಬದಲಾಗಬೇಕು. ಸಾಹಿತ್ಯ ಮತ್ತು ಕಲೆಗಳು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸಾಧನಗಳಾಗಬೇಕು.

ಇಂದಿನ ಮಕ್ಕಳಿಗೆ ಕುಟುಂಬ ಮೌಲ್ಯಗಳನ್ನು, ವ್ಯಕ್ತಿತ್ವ ವಿಕಸನವನ್ನು ಅಳವಡಿಸಿಕೊಳ್ಳುವ ಮನೋಭಾವ ಬೆಳೆಸುವಲ್ಲಿ ಮನೆ, ಶಾಲೆಯ ವಾತಾವರಣ, ಶಿಕ್ಷಕರು-ಪಾಲಕರ ಪಾತ್ರ ಮಹತ್ವದ್ದಾಗಿದೆ. ಹತ್ತು ಜನ ಪುತ್ರರಿಗೆ ಒಂದು ಮರ ಸಮ. ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಬೆಳೆಸುವಲ್ಲಿ ಕಂಕಣಬದ್ಧರಾಗೋಣ. ಶಿಕ್ಷಣ ಸೇವೆಯೇ ದೇವರ ಸೇವೆ ಎಂಬ ಧ್ಯೆಯೋದ್ದೇಶದಡಿ ಬಿಸಿಎನ್ ಸಂಸ್ಥೆಯ ನಿಸ್ವಾರ್ಥ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಡಾ.ಜಯಶ್ರೀ ಹೊಸಮನಿ ಮಾತನಾಡಿ, ಮಕ್ಕಳಿಗೆ ಆತ್ಮವಿಶ್ವಾಸ ಮೂಡಿಸಿದಾಗ ಕಲಿಕೆ ಪರಿಣಾಮಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು-ಪಾಲಕರ ಪಾತ್ರ ಮುಖ್ಯವಾಗಿದೆ ಎಂದರು. ಬಿಸಿಎನ್ ಚಾರಿಟೇಲ್ ಟ್ರಸ್ಟ್ನ ಅಧ್ಯಕ್ಷ ಬಸವರಾಜ ನೆಲವಗಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥರಾದ ಲತಾದೇವಿ ನೆಲವಗಿ, ಕಾರ್ಯದರ್ಶಿ ಲೋಹಿತ ನೆಲವಿಗಿ, ನಿರ್ದೇಶಕರಾದ ಮಾಹಾಂತೇಶ ನೆಲವಗಿ, ಡಾ. ರೇವತಿ ಲೋಹಿತ ನೆಲವಗಿ, ಶಿಲ್ಪಾ ಪ್ರಶಾಂತ ನೆಲವಿಗಿ, ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ, ನಾಗರಾಜ ಕುಲಕರ್ಣಿ, ದಿಗಂಬರ ಪೂಜಾರ ಸೇರಿ ಹಲವರಿದ್ದರು.

ಕಾರ್ಯಕ್ರಮದಲ್ಲಿ ಎಸ್.ಎಫ್. ಹತ್ತಿಕಾಳ, ಡಾ. ದೀಪಾ ಬಿಂಕದಕಟ್ಟಿ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಸವಿತಾ ಆದಿ, ರೇಖಾ ವಡಕಣ್ಣವರ, ಬಸವರಾಜ ಬೆಂಡಿಗೇರಿ, ಅಶೋಕ ಪೂಜಾರ, ಸುಲೇಮಾನ ಕಣಿಕೆ, ಸೈಯದ್‌ರಫೀಕ ಫೀರಜಾಧೆ, ಭವ್ಯ ಕತ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


Spread the love

LEAVE A REPLY

Please enter your comment!
Please enter your name here