ರೈತರ ಹಿತರಕ್ಷಣೆಗೆ ಜಿಲ್ಲಾಡಳಿತ ಬದ್ಧ : ದಿವ್ಯ ಪ್ರಭು

0
Collector's meeting with farmer leaders
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಬೀಜ, ರಸಗೊಬ್ಬರ, ವಿಮೆ, ಪರಿಹಾರ, ಕೃಷಿ ಪರಿಕರಗಳ ಸಹಾಯಧನ ಸೇರಿದಂತೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ. ಬೀಜ, ರಸಗೊಬ್ಬರ ವಿತರಣೆಯಲ್ಲಿ ಸರಕಾರಿ ಇಲಾಖೆ ಅಥವಾ ಸಹಕಾರಿ, ಖಾಸಗಿ ವ್ಯಾಪಾರಸ್ಥರಿಂದ ತೊಂದರೆ ಆದಲ್ಲಿ, ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಅಥವಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಿ. ರೈತ ಹಿತರಕ್ಷಣೆಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

Advertisement

ಅವರು ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಮುಂಗಾರು ಪೂರ್ವ ಸಿದ್ಧತೆಗಳ ಕುರಿತು ಜಿಲ್ಲೆಯ ರೈತ ಮುಖಂಡರು ಹಾಗೂ ರೈತ ಸಂಘಟನೆಗಳೊಂದಿಗೆ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

Collector's meeting with farmer leaders

ಜಿಲ್ಲಾಡಳಿತ ಪೂರ್ವಯೋಚಿತವಾಗಿ ಜಿಲ್ಲೆಯ ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಹೆಚ್ಚುವರಿ ಬೀಜ, ಗೊಬ್ಬರದ ದಾಸ್ತಾನು ಮಾಡಿದೆ. ರೈತರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಗೊಡದೆ ಸಮಾಧಾನದಿಂದ ಅಗತ್ಯ ಬೀಜ, ರಸಗೊಬ್ಬರ ಪಡೆಯಬೇಕು. ಸರಕಾರದ ನಿಯಮಾನುಸಾರ ಪ್ರತಿ ರೈತರಿಗೆ ನೀಡಬೇಕಾದ ಬೀಜ, ರಸಗೊಬ್ಬರ ವಿತರಿಸಲು ಜಿಲ್ಲಾಡಳಿತ ಸಿದ್ದವಿದ್ದು, ಈಗಾಗಲೇ ಅಗತ್ಯ ಕ್ರಮವಹಿಸಿದೆ ಎಂದು ಹೇಳಿದರು.

ರೈತರ ಬೇಡಿಕೆ ಅನುಸಾರ ಬುಧವಾರದಿಂದ ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರೈತರ ಪಾಳಿ ಮುಗಿಯುವವರೆಗೆ ಬೀಜಗಳನ್ನು ವಿತರಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಬೇರೆ ಇಲಾಖೆಗಳಿಂದ ನಿಯೋಜಿಸಿ, ಸೂಕ್ತ ಬಂದೋಬಸ್ತ್ ನೀಡಲಾಗುತ್ತದೆ. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ರೈತ ಸಂಪರ್ಕ ಕೇಂದ್ರಗಳಿರುವ ಬ್ಯಾಂಕ್ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ರಸಗೊಬ್ಬರ ವ್ಯಾಪಾರಿಗಳು ಗುಣಮಟ್ಟ, ಸಮರ್ಪಕ ಮತ್ತು ಸರಕಾರ ನಿಗದಿ ಪಡಿಸಿದ ದರದಲ್ಲಿ ರಸಗೊಬ್ಬರ ವಿತರಿಸುವುದು ಕಡ್ಡಾಯ. ರೈತರಿಗೆ ಅಗತ್ಯ ಇರುವ ರಸಗೊಬ್ಬರ ಮಾತ್ರ ನೀಡಬೇಕು. ಲಿಂಕ್ ಜಿಂಕ್ ಹೆಸರಿನಲ್ಲಿ ರೈತರಿಗೆ ಬೇಡವಾದ ರಸಗೊಬ್ಬರ, ರಾಸಾಯನಿಕ ಖರೀದಿಸಲು ಒತ್ತಾಯಿಸಿದರೆ ಅಥವಾ ರಸಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತಕ್ಷಣ ಅವರ ಲೈಸನ್ಸ್ ರದ್ದುಪಡಿಸಲು ಕೃಷಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣನವರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ವೇದಿಕೆಯಲ್ಲಿದ್ದರು.

ಈಗಾಗಲೇ 10 ಕಂತುಗಳಲ್ಲಿ ಬರ ಪರಿಹಾರ ವಿತರಿಸಲಾಗಿದ್ದು, 11ನೇ ಕಂತು ಬಿಡುಗಡೆಗೆ ಕೋರಲಾಗಿದೆ. ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಪರಿಹಾರ ಜಮೆ ಆಗಿರಲಿಲ್ಲ. ಇವುಗಳ ಕುರಿತು ಪರಿಶೀಲಿಸಿ ವರದಿ ನೀಡಲು, ತಹಸೀಲ್ದಾರ ಮೂಲಕ ಗ್ರಾಮ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮತ್ತು ಪ್ರತಿ ತಹಸೀಲ್ದಾರ ಕಚೇರಿಯಲ್ಲಿ ಬರ ಪರಿಹಾರ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here