ಹೊರಟ್ಟಿ ಹೇಳಿಕೆಯಲ್ಲಿ ರಾಜಕೀಯ ಪಿತೂರಿ ಅಡಗಿದೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಎಚ್.ಕೆ. ಪಾಟೀಲ ಮತ್ತು ತಮ್ಮ ಮಧ್ಯೆ ಹೊಂದಾಣಿಕೆ ಇತ್ತು ಎನ್ನುವ ಬಸವರಾಜ ಹೊರಟ್ಟಿ ಅವರ ಹೇಳಿಕೆಯಲ್ಲಿ ರಾಜಕೀಯ ಪಿತೂರಿ ಅಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್. ಪಾಟೀಲ ಪ್ರತಿಕ್ರಿಯೆ ನೀಡಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಶಾಸಕ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್.ಕೆ. ಪಾಟೀಲ ಅವರನ್ನು ತೇಜೋವಧೆ ಮಾಡುವುದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಎಚ್.ಕೆ. ಪಾಟೀಲ ಅವರೊಂದಿಗೆ ವಿಷಯಾಧಾರಿತ ಒಪ್ಪಂದ ಇತ್ತು. ಆದರೆ ಈ ಬಾರಿ ಆ ರೀತಿ ಒಪ್ಪಂದ ಇಲ್ಲ. ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎನ್ನುವ ಬಸವರಾಜ ಹೊರಟ್ಟಿ ಅವರ ಹೇಳಿಕೆಯಲ್ಲಿ ಯಾವುದೇ ನಿಜಾಂಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರ ಇಂಥ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಯಾವುತ್ತೂ ಸಹಿಸುವುದಿಲ್ಲ. ಎಚ್.ಕೆ. ಪಾಟೀಲ ಅವರ ತೇಜೋವಧೆಗೆ ನೀಡಿರುವ ಇಂಥ ಹೇಳಿಕೆಯನ್ನು ಹೊರಟ್ಟಿ ಅವರು ತಕ್ಷಣ ಹಿಂಪಡೆಯಬೇಕು ಮತ್ತು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಬಸವರಾಜ ಹೊರಟ್ಟಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದ ಚಿತ್ರವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಪಕ್ಷ ಮತ್ತು ಸರಕಾರದಲ್ಲಿ ನಾನಾ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಎಚ್.ಕೆ.ಪಾಟೀಲ, ಪ್ರಬುದ್ಧ ರಾಜಕಾರಣಿ ಎಂಬ ಖ್ಯಾತಿ ಹೊಂದಿದ್ದಾರೆ. ಅಂತಹ ನಾಯಕರ ವಿರುದ್ಧ ಇಂತಹ ಸಣ್ಣತನದ ಹೇಳಿಕೆ ನೀಡಿವುದು ಶೋಭೆಯಲ್ಲ. ಒಂದು ವೇಳೆ ಹೊಂದಾಣಿಕೆ ಮಾಡಿಕೊಂಡಿದ್ದೆ ಆದಲ್ಲಿ 2008ರ ಚುನಾವಣೆಯಲ್ಲಿ ಎಚ್.ಕೆ. ಪಾಟೀಲ ಸೋಲುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಟಿ.ಈಶ್ವರ ಮಾತನಾಡಿ, ಈ ಹಿಂದೆ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಆಗ ಹೊರಟ್ಟಿ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದು ಎಲ್ಲರಿಗೂ ಗೊತ್ತಿರುವುದೇ. ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೂ ಒಳ ಒಪ್ಪಂದಗಳಿವೆ. ಇದೆಲ್ಲವನ್ನೂ ಅರಿತಿರುವ ಜೆಡಿಎಸ್ ವರಿಷ್ಟರು ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡದೇ, ಅಧಿಕಾರದಿಂದ ದೂರವಿರಿಸಿದರು ಎಂದು ದೂರಿದರು.
ಸಜ್ಜನ ರಾಜಕಾರಣಿ ಎಚ್.ಕೆ.ಪಾಟೀಲ ವಿರುದ್ಧ ಆರೋಪ ಕುರಿತು ನಾಲ್ಕು ದಿನಗಳಲ್ಲಿ ಬಸವರಾಜ ಹೊರಟ್ಟಿ ಅವರು ಕ್ಷಮೆ ಕೋರಬೇಕು. ಇಲ್ಲವೇ ಹೊರಟ್ಟಿಯ ಅವರ ರಾಜಕೀಯ ಒಳಒಪ್ಪಂದಗಳನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ ಉಪಸ್ಥಿತರಿದ್ದರು.

Advertisement

Spread the love

LEAVE A REPLY

Please enter your comment!
Please enter your name here