ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಅನೇಕ ಗ್ರಾಮಗಳು ತಮ್ಮದೇ ಆದ ವೈಶಿಷ್ಟ್ಯತೆ ಹಾಗೂ ಇತಿಹಾಸವನ್ನು ಹೊಂದಿದ್ದು, ಯಳವತ್ತಿ ಗ್ರಾಮವೂ ಅವುಗಳಲ್ಲೊಂದು. ಈ ಗ್ರಾಮವು ಲಕ್ಷ್ಮೇಶ್ವರ ತಾಲೂಕಿನಲ್ಲಿಯೇ 2ನೇ ದೊಡ್ಡ ಗ್ರಾಮವಾಗಿದ್ದು, ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿದೆ. ಇಲ್ಲಿನ ಜಾಗೃತ ಆರಾಧ್ಯ ದೇವನಾದ ಶ್ರೀ ಗುಂಡೇಶ್ವರ ದೇವರ ಜಾತ್ರೆ ಜೂನ್ 1ರಂದು ಅದ್ದೂರಿಯಾಗಿ ಜರುಗಲಿದೆ.
ಪುರಾಣ ಕಾಲದಲ್ಲಿಯೇ ಗ್ರಾಮದ ಉಲ್ಲೇಖ: 12ನೇ ಶತಮಾನದಲ್ಲಿಯೇ ಶ್ರೀ ಗುಂಡೇಶ್ವರ ದೇವಸ್ಥಾನದಲ್ಲಿ ಸಂಸ್ಕೃತ ಪಾಠಶಾಲೆ ನಡೆಯುತ್ತಿತ್ತು ಹಾಗೂ ಸಾವಿರಾರು ವಟುಗಳು ಇಲ್ಲಿ ವಾಸವಿದ್ದು ಹೋಮ-ಹವನ ಹಾಗೂ ಮಂತ್ರಾಭ್ಯಾಸ ಪಾಠಗಳನ್ನು ಕಲಿಯುತ್ತಿದ್ದರು ಎಂದು ಪುರಾಣ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿನ ಪುರಾತನ ಕೋಟೆಯೂ ಸಹ ಯಳವತ್ತಿಯ ಇತಿಹಾಸ ಸಾರುತ್ತದೆ. ಇಲ್ಲಿನ ಗುಂಡೇಶ್ವರ ದೇವಸ್ಥಾನವು ಹೆಚ್ಚು ಜಾಗೃತ ಸ್ಥಳವಾಗಿದ್ದು, ನಾಡಿನ ಸಾವಿರಾರು ಭಕ್ತರು ಇಲ್ಲಿನ ದೇವರಿಗೆ ನಡೆದುಕೊಳ್ಳುತ್ತಾರೆ.
ಶಿಶುನಾಳ ಶರೀಫರು, ಗುರು ಗೋವಿಂದಭಟ್ಟರು ಕಾಲಿಟ್ಟ ನೆಲ: ಶ್ರೀ ಗುಂಡೇಶ್ವರ ದೇವಸ್ಥಾನಕ್ಕೆ ಸಂತ ಶಿಶುನಾಳ ಶರೀಫರು ಹಾಗೂ ಗುರು ಗೋವಿಂದಭಟ್ಟರು ದರ್ಶನಕ್ಕೆ ಆಗಮಿಸಿದಾಗ ಶರೀಫರು ಆಕಸ್ಮಿಕವಾಗಿ ನಾಗರ ಹಾವಿನ ಮೇಲೆ ಕಾಲಿಡುತ್ತಾರೆ. ತಕ್ಷಣ ಅವರ ಮೈಯೆಲ್ಲಾ ಬೆವರಿ ಭಯಪಟ್ಟು ಅಂದೇ ಯಾರೇ ವಿಷ ಜಂತುವಿನಿಂದ ಬಾಧೆಗೊಳಪಟ್ಟಲ್ಲಿ ಅಂತವರ ವಿಷ ನಿವಾರಣೆ ಆಗಲಿ ಎಂದು ಶ್ರೀ ಗುಂಡೇಶ್ವರ ದೇವಸ್ಥಾನದ ಮುಖ್ಯದ್ವಾರದಲ್ಲಿ ದೊಡ್ಡದಾದ ಚೌಕಾಕಾರದ ವಿಷನಿವಾರಣಾ ಕಲ್ಲಿನ ಹೊಸ್ತಿಲನ್ನು ಸ್ಥಾಪಿಸಿದರು.
ಅಂದಿನಿಂದ ಈಗಲೂ ಸಹ ಸುತ್ತಮುತ್ತಲಿನ ಜನರು ವಿಷಜಂತುಗಳಿಂದ ಬಾಧೆಗೊಳಪಟ್ಟಲ್ಲಿ ಈ ದೇವಸ್ಥಾನಕ್ಕೆ ತಕ್ಷಣ ಬಂದು ಶ್ರೀ ಗುಂಡೇಶ್ವರನ ಪಾದೋದಕ ಸೇವಿಸಿದ ಅರೆಗಳಿಗೆಯಲ್ಲಿಯೇ ವಿಷ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ.
ವಿಶೇಷತೆ
ಇಲ್ಲಿನ ಇನ್ನೊಂದು ವಿಶೇಷವೆಂದರೆ ದೇವಸ್ಥಾನದ ಬಲಗಡೆ ಇರುವ ಬಾವಿ. ಈ ಬಾವಿಯ ನೀರು ದಿನದ ಮೂರು ಹೊತ್ತಿಗೆ ತಕ್ಕಂತೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಇದು ಶ್ರೀ ಗುಂಡೇಶ್ವರನ ಲೀಲೆಯಂದು ಪೂರ್ವಜರು ಹೇಳುತ್ತಾರೆ. ಶ್ರೀ ಗುಂಡೇಶ್ವರನ ಜಾತ್ರೆ ವರ್ಷದ ಕೊನೆಯ ಜಾತ್ರೆಯಾಗಿದ್ದು, ಶಿರಹಟ್ಟಿ ಫಕ್ಕಿರೇಶ್ವರ ಜಾತ್ರೆ ನಡೆದ 9ನೇ ದಿನ ಶುದ್ಧ ದಶಮಿಯಂದು ಈ ಜಾತ್ರೆ ನಡೆಯುತ್ತದೆ. ಜೂನ್ 1ರ ಸಂಜೆ 5.30ಕ್ಕೆ ಮಹಾರಥೋತ್ಸವವು ಅದ್ದೂರಿಯಾಗಿ ಜರುಗಲಿದ್ದು, ಜೂನ್ 2ರ ಸಂಜೆ 5.30ಕ್ಕೆ ಕಡುಬಿನಕಾಳಗ ನಡೆಯಲಿದೆ.