ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ಅದರಲ್ಲೂ ಭಾವಿ ಶಿಕ್ಷಕರನ್ನು ತಯಾರು ಮಾಡುವ ಶಿಕ್ಷಣ ಮಹಾವಿದ್ಯಾಲಯಗಳ ಪ್ರಶಿಕ್ಷಣಾರ್ಥಿಗಳು ಸರ್ವಾಂಗೀಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಿದ್ದು, ಎನ್‌ಎಸ್‌ಎಸ್ ಶಿಬಿರಗಳು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ನುಡಿದರು.
ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಜರುಗಿದ ಅಂತರ್ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯಕ್ರಮ ಜ್ಞಾನದ ಜೊತೆಗೆ ಐಕ್ಯತೆ, ಸಹಕಾರ, ಸಂಘಟನೆ ಮುಂತಾದ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎನ್‌ಎಸ್‌ಎಸ್‌ನಂತಹ ಸಮಾಜಮುಖಿ ಶಿಬಿರಗಳಲ್ಲಿ ಭಾಗವಹಿಸಿ ಅನುಭವ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಮಲ್ಲಿಕಾರ್ಜುನ ನಾಯಕ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಕಾರ್ಯ ಮುಂದಿನ ಪೀಳಿಗೆಗೆ ಅನುಕರಣೀಯವಾಗುತ್ತದೆ.
ಯಾವುದೇ ಪ್ರತಿಷ್ಠೆಯನ್ನು ಬಯಸದೆ ನಿಜವಾದ ಸೇವೆಯನ್ನು ಮಾಡೋಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಜಿಲ್ಲೆಯ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ. ವಿ.ಎಚ್. ಕೊಳ್ಳಿ ಮಾತನಾಡಿ, ಯುವಶಕ್ತಿ ಬೆಳೆಯಲು ಒಂದು ಕೈಯಲ್ಲಿ ವಿವೇಕ ಇನ್ನೊಂದು ಕೈಯಲ್ಲಿ ಯೌವ್ವನ ಇರಬೇಕು. ಇವೆರಡು ಆಸ್ತಿಗಳನ್ನು ಸಮೃದ್ಧವಾಗಿ ಬಳಸಿಕೊಂಡು ಸಮಾಜಮುಖಿ ಕ್ರಿಯಾಶೀಲ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯ, ಪಿ.ಪಿ.ಜಿ ಶಿಕ್ಷಣ ಮಹಾವಿದ್ಯಾಲಯ, ಜೆ.ಪಿ. ಶಿಕ್ಷಣ ಮಹಾವಿದ್ಯಾಲಯ, ಸ.ಪ್ರ.ದ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಾಧಿಕಾರಿ ಡಾ. ಕಸ್ತೂರಿ ದಳವಾಯಿ ಸ್ವಾಗತಿಸಿದರು. ಕೀರ್ತಿ ಹಿರೇಮಠ ಹಾಗೂ ರೋಹಿಣಿ ಹಲಗಿತ್ತಿ ನಿರೂಪಿಸಿದರು. ಕಾರ್ಯಕ್ರಮಾಧಿಕಾರಿ ಎಮ್.ಎಮ್. ನದಾಫ್ ವಂದಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಡಾ. ಕಲ್ಲಯ್ಯಜ್ಜನವರು ಮಾತನಾಡಿ, ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರಲು ಸಾಧ್ಯವಿದ್ದು, ಆ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು ಏಳು ದಿನಗಳ ಕಾಲ ಉತ್ತಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.