ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್

0
Rashtriya Lok Adalat on 13th July
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಜುಲೈ 29ರಿಂದ ಆಗಸ್ಟ್ 3ರವರೆಗೆ ಸರ್ವೋಚ್ಛ ನ್ಯಾಯಾಲಯದಲ್ಲಿರುವ ವಿವಿಧ ಪ್ರಕರಣಗಳನ್ನು ವಿಶೇಷ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಧಾರವಾಡ ಜಿಲ್ಲಾ ವ್ಯಾಪ್ತಿಯ ಕಕ್ಷಿದಾರರು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿರುವ ತಮ್ಮ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಹೊಂದಿರುವ ಕಕ್ಷಿದಾರರಿಗೆ ಮಾಹಿತಿ, ನೋಟಿಸ್ ನೀಡಲು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಕೆ. ಸೋಮಶೇಖರ ನಿರ್ದೇಶನ ನೀಡಿದ್ದಾರೆ. ಅದರಂತೆ ಕ್ರಮವಹಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ತಿಳಿಸಿದರು.
ಅವರು ಸೋಮವಾರ ಬೆಳಿಗ್ಗೆ ಧಾರವಾಡ ಜಿಲ್ಲಾ ನ್ಯಾಯಾಲಯದ ವಿಡಿಯೋ ಸಂವಾದ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಜರುಗಿಸಿ, ಮಾಹಿತಿ ನೀಡಿ ಮಾತನಾಡಿದರು.
ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಹೊಂದಿದವರಿಗೆ ವಿಶೇಷ ಜನತಾ ನ್ಯಾಯಾಲಯದಲ್ಲಿ ಭಾಗವಹಿಸಿ, ಇತ್ಯರ್ಥಪಡಿಸಿಕೊಳ್ಳಲು ಜಿಲ್ಲಾ ನ್ಯಾಯಾಲಯದಲ್ಲಿ ಉಚಿತವಾಗಿ ವಿಡಿಯೋ ಕಾನ್ಫರೆನ್ಸ್ ಮತ್ತು ಇತರ ಅನಕೂಲಗಳನ್ನು ಮಾಡಿಕೊಡಲಾಗುತ್ತದೆ. ಜಿಲ್ಲಾ ಕಕ್ಷಿದಾರರಿಗೆ ಮತ್ತು ಸಾರ್ವಜನಿಕರಿಗೆ ಈ ಸಂಗತಿಯ ಬಗ್ಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನು ನೀಡಬೇಕು. ಇದರಿಂದ ಬಡ ಮತ್ತು ರಾಜಿ ಅಗತ್ಯವಿರುವ ಕಕ್ಷಿದಾರರಿಗೆ ಸಹಾಯವಾಗುತ್ತದೆ ಎಂದು ವಿನಂತಿಸಿದರು.
ಜುಲೈ 13ರಂದು ಜರುಗುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಮೇ 30ರವರೆಗೆ ಒಟ್ಟು 10,704 ಪ್ರಕರಣಗಳನ್ನು ರಾಜೀ ಮಾಡಿಸಲು ಗುರುತಿಸಲಾಗಿದೆ. ಪ್ರತಿ ಅದಾಲತ್‌ನಲ್ಲೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ, ಮುಖ್ಯ ಕಾರ್ಯನಿರ್ವಾಹಣಾಕಾರಿ, ಜಿಲ್ಲಾ ಪಂಚಾಯತ್, ಧಾರವಾಡ ಹಾಗೂ ಆಯುಕ್ತರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಇವರಿಗೆ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡಲು ನಿರ್ದೇಶಿಸಲಾಗುತ್ತಿದೆ.
ಜುಲೈ 13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲೂ ಸಹ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ದಾವೆಗಳು, ಚೆಕ್ ಬೌನ್ಸ್ ಪ್ರಕರಣಗಳು, ವಿವಾಹ ವಿಚ್ಛೇದನ ಹೊರತುಪಡಿಸಿ ಕೌಟುಂಬಿಕ ಪ್ರಕರಣಗಳು, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಎಲ್.ಎ.ಸಿ ಪ್ರಕಣಗಳು, ಅಪಘಾತ ಪರಿಹಾರ ಪ್ರಕರಣಗಳನ್ನು ರಾಜೀ ಸಂದಾನ ಮೂಲಕ ಇತ್ಯರ್ಥಪಡಿಸಲು ಪ್ರಕರಣಗಳ ಕಕ್ಷಿದಾರರು, ಇಲಾಖೆಗಳ ಅಧಿಕಾರಿಗಳು, ನ್ಯಾಯವಾದಿಗಳು ಸಹಕರಿಸಬೇಕೆಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾದೀಶೆ ಕೆ.ಜಿ. ಶಾಂತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರುಶರಾಮ ದೊಡ್ಡಮನಿ ಇದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಸಲಹೆ, ಸೂಚನೆ, ಮಾರ್ಗದರ್ಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರತಿ ತಾಲೂಕಿಗೂ ಭೇಟಿ ನೀಡಿ ಸ್ಥಳೀಯ ನ್ಯಾಯಾಧೀಶರುಗಳೊಂದಿಗೆ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳ ಮತ್ತು ನ್ಯಾಯವಾದಿಗಳ ಸಂಘಗಳ ಸಭೆ ನಡೆಸಿ ಲೋಕ ಅದಾಲತ್‌ನ ಬಗ್ಗೆ ಹಾಗೂ ಲಘು ಪ್ರಕರಣಗಳ ಕಾಯ್ದೆಗಳನ್ನು ಸೂಕ್ತ ರೀತಿಯಲ್ಲಿ ಜಾರಿ ಮಾಡುವ ಮೂಲಕ ಜಿಲ್ಲೆಯ ಎಲ್ಲ ಆಡಳಿತ ಮಂಡಳಿ ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

Spread the love
Advertisement

LEAVE A REPLY

Please enter your comment!
Please enter your name here