ಸಾರ್ವಜನಿಕರು ಪರಿಸರ ಸಂರಕ್ಷಣೆಗೆ ಮುಂದಾಗಲಿ

0
1001 plantation drive in different areas
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಕಡೆಗಣಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.

Advertisement

ಬುಧವಾರ ವಿದ್ಯಾನಗರದ ಹೊಸ ಕೋರ್ಟ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹುಬ್ಬಳ್ಳಿ, ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಹುಬ್ಬಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.

1973ರಲ್ಲಿ ವಿಶ್ವಸಂಸ್ಥೆಯು ಮೊದಲ ಬಾರಿಗೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಹಿತದೃಷ್ಟಿಯಿಂದ ವಿಶ್ವದಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪ್ರಸ್ತುತ ಸುಮಾರು 173 ದೇಶಗಳಲ್ಲಿ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪರಿಸರ ಸಂರಕ್ಷಣೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪರಿಸರವನ್ನು ಹಾಳು ಮಾಡದಂತೆ ತಡೆಯುವುದು ವಿಶ್ವ ಪರಿಸರ ದಿನದ ಮೂಲ ಉದ್ದೇಶವಾಗಿದೆ. ಆಧುನಿಕತೆಯಿಂದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಅಲ್ಲದೇ ಪರಿಸರದ ಕುರಿತು ಜನರಲ್ಲಿ ಕಾಳಜಿ ಕಡಿಮೆಯಾಗುತ್ತಿದೆ. ಕೆರೆ, ರಸ್ತೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ತ್ಯಾಜ್ಯವನ್ನು ಹಾಕದಂತೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಮ್.ಎಸ್. ಬಾಣದ ಮಾತನಾಡಿ, ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಾಗೆ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಸಾಲು ಮರದ ತಿಮ್ಮಕ್ಕ ಅವರ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕಿದೆ. ದುಡಿದ ಹಣವನ್ನು ಆಸ್ಪತ್ರೆಗೆ ಹಾಕುವ ಬದಲು ಸಸಿ ನೆಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಹಣ ಉಳಿತಾಯ ಮಾಡಬಹುದು. ವಿಶ್ವ ಪರಿಸರ ದಿನ ಜೂನ್ 5ಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಂದು ಗ್ರಾಮ, ನಗರ ಪ್ರದೇಶದ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೃಪತುಂಗ ಬೆಟ್ಟ, ಗಬ್ಬೂರು ಹಾಗೂ ವಿವಿಧ ಪ್ರದೇಶಗಳಲ್ಲಿ 1001 ಸಸಿಗಳ ನೆಡುವಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಾಂಕೇತಿಕವಾಗಿ ಸಸಿಗಳನ್ನು ವಿತರಣೆ ಮಾಡಲಾಯಿತು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಭುಲಿಂಗ ಗಡ್ಡದ, ಅರಣ್ಯ ಅಧಿಕಾರಿ ಪ್ರಕಾಶ ಕರಗುಪ್ಪಿ, ಹುಬ್ಬಳ್ಳಿ ನ್ಯಾಯಾಲಯದ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಜಶೇಖರ ತಿಳಗಂಜಿ ನಿರೂಪಿಸಿ, ವಂದಿಸಿದರು.

ವಲಯ ಅರಣ್ಯ ಅಧಿಕಾರಿ ಆರ್.ಎಸ್. ಉಪ್ಪಾರ ಮಾತನಾಡಿ, ಇಂದು ನಾವು ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ, ಅಭಿವೃದ್ಧಿ ಕಾರ್ಯಗಳಿಂದ ಪರಿಸರದ ಮೇಲೆ ನಿಷ್ಕಾಳಜಿ ತೋರುತ್ತಿದ್ದೇವೆ. ಪ್ರತಿ ದಿನವೂ ಸಹ ಸಸಿ ನೆಡುವ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಹೆಚ್ಚಾಗಿ ಮರಗಳನ್ನು ಬೆಳೆಸುವುದರಿಂದ ಬರಗಾಲ ಪರಿಸ್ಥಿತಿ ಉಂಟಾಗುವುದನ್ನು ತಡೆಯಬಹುದು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪರಿಸರ ಸಹಕಾರಿಯಾಗಿದೆ. ಹೀಗಾಗಿ ಪರಿಸರ ರಕ್ಷಣೆಗೆ ಎಲ್ಲರೂ ಪಣತೊಡಬೇಕು ಎಂದರು.


Spread the love

LEAVE A REPLY

Please enter your comment!
Please enter your name here