ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇತ್ತೀಚಿನ ದಿನಗಳಲ್ಲಿ ತಾಪಮಾನ ವಿಪರೀತವಾಗಿ ಏರುತ್ತಿದ್ದು, ಜನ ಸಂಕಷ್ಟ ಅನುಭವಿಸುವಂತಾಗಿದೆ. ಹೆಚ್ಚುತ್ತಿರುವ ತಾಪಮಾನವನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಸಸಿಗಳನ್ನು ನೆಟ್ಟು ಪೋಷಿಸುವುದು ಎಂದು ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಜಿ.ಎಚ್ ಅಭಿಪ್ರಾಯಪಟ್ಟರು.
ಅವರು ಬುಧವಾರ ರಿವಾರ್ಡ್ ಯೋಜನೆಯಡಿ ತಾಲೂಕಿನ ಮುಳಗುಂದದ ಮೊರಾರ್ಜಿ ದೇಸಾಯಿ ಉನ್ನತೀಕರಿಸಿದ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಿವಾರ್ಡ್ ಯೋಜನೆಯ ಅರಣ್ಯ ಹಾಗೂ ತೋಟಗಾರಿಕಾ ಘಟಕದ ಅಡಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಸಮಗ್ರ ಕೃಷಿ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಎಚ್.ಆರ್ ಸಕ್ಕರಿ ಮಾತನಾಡಿ, ಶಾಲೆಗಳಲ್ಲಿ ಈ ರೀತಿಯ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ನಮ್ಮ ಶಾಲೆಯಲ್ಲಿ ಪ್ರತಿ ಮಗುವಿಗೂ ಪರಿಸರ ಕಾಳಜಿ ಮೂಡಿಸುವ ಪ್ರಾಯೋಗಿಕ ಪಾಠ ಮಾಡುತ್ತೇವೆ ಎಂದರು.
ಕೃಷಿ ಅಧಿಕಾರಿ ಎಫ್.ಸಿ. ಗುರಿಕಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಡಬಾಲಿ, ವಿಶಾಲ ಚೌದರಿ, ಜೆ.ಡಿ. ಶಿರಹಟ್ಟಿ, ಆರ್.ಎಂ. ಮಳಗಾವಿ, ಮಂಗಳಾ ಸೇರಿದಂತೆ ಶಾಲಾ ಸಿಬ್ಬಂದಿ ಹಾಗು ರಿವಾರ್ಡ್ ಯೋಜನೆಯ ಸಿಬ್ಬಂದಿ ಹಾಜರಿದ್ದರು.


